ವಿಜಯಪುರ: ಜಗದೀಶ ಶೆಟ್ಟರ್ ಮತ್ತೆ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಇದು ಹಸೀ ಸುಳ್ಳು. ಇಂದು ಸಾಕಷ್ಟು ಜನ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದಾರೆ. ಜೊತೆಗೆ ನನ್ನ ಮೂಲಕ ಕೂಡಾ ಸಂಪರ್ಕ ಮಾಡಿ ಕಾಂಗ್ರೆಸ್ ಸೇರಲು ಮುಂದೆ ಬರುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಈ ಸುಳ್ಳು ಸುದ್ದಿ ಹಬ್ಬಿಸಿ, ಜಗದೀಶ ಶೆಟ್ಟರ್ ಅವರೇ ಮರಳಿ ಬರುತ್ತಾರೆ ಅಂತಾ ಆಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ವಿಜಯಪುರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಲ್ಲಿರುವ ಜನರನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆದಿದೆ ಅಷ್ಟೇ. ನನಗಂತೂ ಬಿಜೆಪಿಯಿಂದ ಯಾರೂ ಆಹ್ವಾನ ಕೊಟ್ಟಿಲ್ಲ, ಆಹ್ವಾನ ಕೊಡುವ ಪ್ರಶ್ನೆಯೇ ಬರುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನನಗೆ ಮತ್ತು ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ತಪ್ಪಿಸಿದ್ದ ಪರಿಣಾಮ ಅಸೆಂಬ್ಲಿ ಚುನಾವಣೆಯಲ್ಲಿ ಕರ್ನಾಟಕದ ಜನತೆ ಈ ಫಲಿತಾಂಶ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಹಿನ್ನಡೆಯಾಗಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಜನಸಂಘದಿಂದ ಬಂದಂತಹವರಿಗೆ ಒಂದು ಟಿಕೆಟ್ ಕೊಡಲು ಸಾಧ್ಯವಾಗಲಿಲ್ಲ ಎಂದು ಛೇಡಿಸಿದರು.
ಬಿಜೆಪಿಯವರು ಯಾವ ರೀತಿ ಜನಸಂಘದವರನ್ನು ಕಡೆಗಣಿಸಿದ್ದಾರೆ ಅನ್ನೋದನ್ನು ನೀವೇ ನೋಡಿ. ಹಿಂದುತ್ವಕ್ಕೆ ರಾಜಕಾರಣ ಏಕೆ ಬೆರೆಸುತ್ತಿದ್ದಾರೆ ಗೊತ್ತಿಲ್ಲ. ಜನಸಂಘದಿಂದ ಬಂದಂಥವರಿಗೆ ಕಾಂಗ್ರೆಸ್ ಹೋಗುವಂತೆ ಮಾಡಿದ್ದು ಯಾರು? ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ನನಗೆ ಯಾವ ರೀತಿ ನಡೆಸಿಕೊಂಡು ಹೊರಗೆ ಹಾಕುವಂತಹ ಪ್ರಯತ್ನ ಮಾಡಿದ್ದರಲ್ಲ, ಇದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದರು.
ಪಂಚಾರಾಜ್ಯ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ಎಕ್ಸಿಟ್ ಪೋಲ್ನಲ್ಲಿ ಬಲಯುತವಾಗಿದೆ. ಡಿಸೆಂಬರ್ 03ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದ್ದು ಹೆಚ್ಚು ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಮಾಜಿ ಸಿಎಂ ಭವಿಷ್ಯ ನುಡಿದರು. ಇದೇ ವೇಳೆ, ಬೆಂಗಳೂರಿನ ಹಲವು ಶಾಲೆಗೆ ಹುಸಿ ಬಾಂಬ್ ಬೆದರಿಕೆ ಕರೆ ಕುರಿತು ಮಾತನಾಡಿದ ಅವರು, ಪೊಲೀಸರು ಈಗಾಗಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಬೆಂಗಳೂರು: ಯಾವ ವಲಯದಲ್ಲಿ ಎಷ್ಟು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್?
ಶುಕ್ರವಾರ ಬೆಳಗ್ಗೆ ಬೆಂಗಳೂರು ಹಾಗೂ ಬೆಂಗಳೂರು ಹೊರವಲಯದ ಹಲವು ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ. ಬನ್ನೇರುಘಟ್ಟದ ಏಳು, ಹೆಬ್ಬಗೋಡಿಯ ನಾಲ್ಕು, ಸರ್ಜಾಪುರದ ಐದು, ಜಿಗಣಿಯ ಎರಡು ಖಾಸಗಿ ಶಾಲೆ ಸೇರಿದಂತೆ ಆನೇಕಲ್ ತಾಲೂಕಿನ ಒಟ್ಟು 18 ಖಾಸಗಿ ಶಾಲೆಗಳಿಗೆ ಇಮೇಲ್ ಮೂಲಕ ಈ ಹುಸಿ ಬಾಂಬ್ ಬೆದರಿಕೆ ಕರೆ ರವಾನೆಯಾಗಿದೆ. ಆನೇಕಲ್ ತಾಲೂಕಿನ 18 ಶಾಲೆಗಳು ಸೇರಿ ಒಟ್ಟು 44 ಖಾಸಗಿ ಶಾಲೆಗಳಿಗೆ ಇಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಕರೆ ರವಾನೆಯಾಗಿದೆ.