ವಿಜಯಪುರ: ನಾನು ಜೆಡಿಎಸ್ ಬಿಟ್ಟು ಎಲ್ಲೂ ಹೋಗಲ್ಲ. ಬಿಜೆಪಿ ಸೇರುವ ಮಾತೆ ಇಲ್ಲ ಎಂದು ನಾಗಠಾಣ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ್ ಸ್ಪಷ್ಟಪಡಿಸಿದರು.
ಶಾಸಕ ದೇವಾನಂದ ಚವ್ಹಾಣ ಆಪರೇಷನ್ ಕಮಲಕ್ಕೆ ಒಳಗಾಗಲಿದ್ದಾರೆ ಎನ್ನುವ ವದಂತಿ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಮಾತನಾಡಿದ ಅವರು, ನಾನು ಇವತ್ತು ಬೆಂಗಳೂರಿನಿಂದ ವಿಜಯಪುರಕ್ಕೆ ಬಂದೆ. ಬಂದಾಗ ಎಲ್ಲರೂ ನನಗೆ ಪಕ್ಷ ಬಿಡುವ ಬಗ್ಗೆ ಕೇಳಿದ್ರು, ಆಗ ನನಗೆ ಆಶ್ಚರ್ಯ ಆಯ್ತು ಎಂದರು.
ನಮ್ಮ ರಾಜ್ಯದ ನಾಯಕರಾದ ಕುಮಾರಣ್ಣ, ಹೊರಟ್ಟಿ, ವಿಶ್ವನಾಥ್ ಎಲ್ಲರೂ ಸೇರಿ ಸರ್ಕಾರದ ಬಗ್ಗೆ ಚರ್ಚೆ ಮಾಡಿದ್ದೇವೆ ಹೊರತು ಪಕ್ಷ ಬಿಡುವ ಮಾತನಾಡಿಲ್ಲ. ಈ ವಿಚಾರವಾಗಿ ನನ್ನ ಬಳಿ ಯಾರೂ ಮಾತನಾಡಿಲ್ಲ, ನಮ್ಮ ಸಮಾಜದ ಕೆಲ ಮುಖಂಡರು ಮಾತಾಡಿದ್ರು. ಆದ್ರೆ ನಾನು ನಯವಾಗಿ ತಿರಸ್ಕರಿಸಿದ್ದೇನೆ ಎಂದರು.
ನಾನು ನಿರ್ಗತಿಕ ಆಗಿದ್ದ ವೇಳೆ, ಕುಮಾರಣ್ಣ ಅವರು ನನಗೆ ಅವಕಾಶ ಕೊಟ್ಟು ಬೆಳೆಸಿದ್ದಾರೆ. ನನ್ನನ್ನು ಮನೆ ಮಗನಂತೆ ನೋಡಿಕೊಳ್ತಿದ್ದಾರೆ ಎಂದ ಅವರು, ಲೋಕಸಭೆ ಚುನಾವಣೆಯ ವಿಜಯಪುರ ಅಭ್ಯರ್ಥಿಯಾದ ಪತ್ನಿಯ ಸೋಲಿಗೆ ಯಾರೂ ಹೊಣೆಯಲ್ಲ. ಜನಾಭಿಪ್ರಾಯ ಹೇಗಿದೆಯೋ ಹಾಗೆ ಆಗಿದೆ, ಯಾರನ್ನೂ ದೂಷಿಸುವುದು ಸರಿಯಲ್ಲ ಎಂದರು.
ಸರ್ಕಾರ ಐದು ವರ್ಷ ಇರಲಿದೆ, ಕುಮಾರಸ್ವಾಮಿ ಅವರೇ ಸಿಎಂ ಆಗಿರ್ತಾರೆ. ಸಮ್ಮಿಶ್ರ ಸರ್ಕಾರ ಗಟ್ಟಿಯಾಗಿದೆ, ಇನ್ನೂ ನಾಲ್ಕು ವರ್ಷ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.