ವಿಜಯಪುರ: ವರದಕ್ಷಿಣೆ ಆಸೆಗಾಗಿ ಪತ್ನಿ ಹಾಗೂ ಆಕೆಯ ಪೋಷಕರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಲಿಂಗದಹಳ್ಳಿ ತಾಂಡಾದಲ್ಲಿ ನಡೆದಿದೆ.
ಕಳೆದೆರಡು ವರ್ಷಗಳ ಹಿಂದೆ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ಅನಿತಾಳನ್ನು ಅದೇ ತಾಲೂಕಿನ ಲಿಂಗದಹಳ್ಳಿ ತಾಂಡಾದ ಸಂತೋಷ ಜೊತೆಗೆ ವಿವಾಹ ಮಾಡಿ ಕೊಡಲಾಗಿತ್ತು. ಮದುವೆ ಆದಾಗಿನಿಂದ ತವರು ಮನೆಯಿಂದ ಹಣ ತರುವಂತೆ ಅನಿತಾಳಿಗೆ ಪತಿ ಸಂತೋಷ್ ಹಾಗೂ ಆತನ ಪೋಷಕರು ಹಿಂಸೆ ನೀಡುತ್ತಿದ್ದರಂತೆ.
ಅಲ್ಲದೇ ಪಾಪಿ ಪತಿ ತನ್ನ ತಂದೆಯ ಚಿಕಿತ್ಸೆಗಾಗಿ ತವರಿನಿಂದ ಹಣ ತರುವಂತೆ ಪತ್ನಿ ಅನಿತಾಳಿಗೆ ಪೀಡಿಸುತ್ತಿದ್ದನಂತೆ. ಇದಕ್ಕೆ ಅನಿತಾ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪತಿ ಮಹಾಶಯ, ಅನಿತಾ ಜೊತೆಗೆ ಆಕೆಯ ತಂದೆ-ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಓದಿ: SMA ಚಿಕಿತ್ಸೆಗೆ 16 ಕೋಟಿ ರೂ. ಮೌಲ್ಯದ ಚುಚ್ಚುಮದ್ದು ಪಡೆದಿದ್ದ ಮಗು ಸಾವು!
ಇನ್ನು ಹಲ್ಲೆಯಲ್ಲಿ ಗಾಯಗೊಂಡ ಅನಿತಾ, ತಂದೆ ವಿಠ್ಠಲ್, ತಾಯಿ ಸುರೇಖಾರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.