ವಿಜಯಪುರ : ಪಾಳು ಬಿದ್ದ ಮನೆಗಳು, ಎಲ್ಲಿ ನೋಡಿದರೆ ಅಲ್ಲಿ ಜಾಲಿಕಂಟಿಗಳು. ಸಂಜೆಯಾದರೆ ಇತ್ತ ಬರಲು ಜನ ಹೆದರುವಂತಹ ವಾತಾವರಣ. ಇದು ಕರ್ನಾಟಕ ಹೌಸಿಂಗ್ ಬೋರ್ಡ್ ಜುಮನಾಳ ರಸ್ತೆಯ ಬಡಾವಣೆಯ ದುಸ್ಥಿತಿ.
ಮೂಲಸೌಲಭ್ಯಗಳು ಇಲ್ಲಿ ಮೊದಲೇ ಇಲ್ಲ. ಆದರೂ ಹೌಸಿಂಗ್ ಬೋರ್ಡ್ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಇವರ ಬೇಜವಾಬ್ದಾರಿಯಿಂದ ಬಡಾವಣೆಯಲ್ಲಿರುವ ಕೆಲವೇ ಕುಟುಂಬ ಮನೆ ತೊರೆಯುವ ಪರಿಸ್ಥಿತಿ ಎದುರಾಗಿದೆ.
ನಗರದ ಜುಮನಾಳ ರಸ್ತೆಯಲ್ಲಿ ಹೌಸಿಂಗ್ ಬೋರ್ಡ್ನಿಂದ ಸಿದ್ದೇಶ್ವರ ಬಡಾವಣೆ ಹೆಸರಿನಲ್ಲಿ 1732 ನಿವೇಶನಗಳನ್ನ ಒಳಗೊಂಡ ಬಡಾವಣೆ ನಿರ್ಮಿಸಲಾಗಿದೆ. ಆದರೆ, 10 ವರ್ಷಗಳಾದರೂ ಮೂಲಸೌಲಭ್ಯಗಳನ್ನು ಒದಗಿಸಿಲ್ಲ.
ಪ್ರಾಯೋಗಿಕವಾಗಿ 200 ಮನೆಗಳನ್ನು ನಿರ್ಮಿಸಿ ಮಾರಾಟ ಮಾಡಲಾಗಿದೆ. 175 ಎಕರೆ ಪ್ರದೇಶದಲ್ಲಿ ಹೈದ್ರಾಬಾದ್ ಮೂಲದ ಕಂಪನಿ ಈ ಬಡಾವಣೆ ನಿರ್ಮಾಣ ಮಾಡಿದೆ.
ಹೆಚ್ಐಜಿ ಮನೆಗಳಿಗೆ 27.50 ಲಕ್ಷ ರೂ. ಎಂಐಜಿ ಮನೆಗಳನ್ನು 19.50ಲಕ್ಷ ರೂ. ಹಾಗೂ ಎಲ್ಐಜಿ ಮನೆಗಳನ್ನು 16.50ಲಕ್ಷ ರೂ. ದರ ನಿಗದಿಪಡಿಸಿ ಮಾರಾಟ ಮಾಡಲಾಗಿದೆ. ಸೂರು ಇಲ್ಲದ ಜನ ಮನೆ ಖರೀದಿ ಮಾಡಿದ್ದಾರೆ. ಆದರೆ, ಕುಡಿಯುವ ನೀರು, ಡ್ರೈನೇಜ್ ಸೌಲಭ್ಯ ಸಹ ನೀಡಿಲ್ಲ. ಹೀಗಾಗಿ, ಇಲ್ಲಿ ವಾಸಿಸುವವರು ಸೌಲಭ್ಯ ಇಲ್ಲದೇ ಪರಿತಪಿಸುತ್ತಿದ್ದಾರೆ.
ಒಟ್ಟು ಈ ಬಡಾವಣೆಯಲ್ಲಿ 39 ಹೆಚ್ಐಜಿ, 70 ಎಂಐಜಿ ಹಾಗೂ 91 ಎಲ್ಐಜಿ ಮನೆಗಳನ್ನು ನಿರ್ಮಿಸಲಾಗಿದೆ. ಕಳಪೆ ಕಾಮಗಾರಿಯಿಂದ ಮನೆಗಳು ಕುಸಿಯುವ ಹಂತ ತಲುಪಿವೆ. ಈ ಬಗ್ಗೆ ಹೌಸಿಂಗ್ ಬೋರ್ಡ್ ಅಧಿಕಾರಿಗಳು ಇತ್ತ ತಲೆ ಸಹ ಹಾಕಿಲ್ಲ.
ಮನೆ ನಿರ್ಮಿಸಿ 10 ವರ್ಷದಲ್ಲಿ ಇಡೀ ಬಡಾವಣೆ ಹಾಳುಕೊಂಪೆಯಾಗಿದೆ. ಇದರಿಂದ ಇಲ್ಲಿ ವಾಸಿಸುತ್ತಿರುವ ಕುಟುಂಬದವರು ನಮಗೆ ವಾಪಸ್ ಹಣ ನೀಡಿ ಮನೆ ಖಾಲಿ ಮಾಡುತ್ತೇವೆ ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಸಿದ್ದೇಶ್ವರ ಬಡಾವಣೆಯಲ್ಲಿ ಸಮಸ್ಯೆ ಇರುವುದು ನಿಜ. ಅಲ್ಲಿ ವಾಸಿಸುವ ಜನರಿಗೆ ಸೌಲಭ್ಯ ನೀಡಲು ಕೆಇಬಿ, ವಾಟರ್ ಬೋರ್ಡ್ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ವಿಜಯಪುರ ನಗರದ ಹಲವು ಕಡೆಗಳಲ್ಲಿ ಇದೇ ರೀತಿ ಹೌಸಿಂಗ್ ಬೋರ್ಡ್ ವತಿಯಿಂದ ನಿವೇಶನ ಮಾಡಿ ಕೆಲವು ಮನೆ ನಿರ್ಮಿಸಿವೆ. ಆದರೆ, ಅದನ್ನು ಖರೀದಿಸಿದ ಮಾಲೀಕರ ಹೆಸರಿಗೆ ಮಾಡಲಾಗಿದೆ. ಆದರೆ, ಕಂದಾಯ ಉತಾರ ನೀಡಿಲ್ಲ. ಹೀಗಾಗಿ, ಅವುಗಳು ತಮ್ಮ ನಿವೇಶನವೋ, ಇಲ್ಲವೋ ಎನ್ನುವ ಜಿಜ್ಞಾಸೆಯಲ್ಲಿದ್ದಾರೆ.