ವಿಜಯಪುರ: ಮರ್ಯಾದೆ ಹತ್ಯೆ ಈಗ ಬರ ಜಿಲ್ಲೆ ವಿಜಯಪುರದಲ್ಲಿಯೂ ಬೆಳಕಿಗೆ ಬಂದಿದೆ. ಯುವಕ ಮತ್ತು ಬಾಲಕಿ ಪ್ರೀತಿ ಬಲೆಗೆ ಬಿದ್ದು, ಮನೆಯವರ ಎಚ್ಚರಿಕೆ ಮಾತು ಕೇಳದೇ ಈಗ ಯುವಕ ಶವವಾಗಿ ಪತ್ತೆ ಯಾಗಿದ್ದು, ಬಾಲಕಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರೇಮ - ಪ್ರಣಯ ಜೀವಕ್ಕೆ ಕುತ್ತು ತಂದಿತಾ?: ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ಯುವಕ ಮಲ್ಲಿಕಾರ್ಜುನ ಭೀಮಣ್ಣ ಜಮಖಂಡಿಯ ಶವ ಮೂರು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹದರಿಹಾಳ ಗ್ರಾಮದ ಕೃಷ್ಣಾ ನದಿ ತಟದಲ್ಲಿ ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಲ್ಲಿಕಾರ್ಜುನ ಶವವನ್ನು ಆತ ತೊಟ್ಟ ಟೀ ಶರ್ಟ್ ಆಧಾರದ ಮೇಲೆ ಪೋಷಕರು ಪತ್ತೆ ಮಾಡಿದ್ದಾರೆ. ಆದರೆ, ಬಾಲಕಿ ಜೀವಂತವಾಗಿ ಇದ್ದಾಳೋ ಅಥವಾ ಇಲ್ಲವೋ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.
ಬಸ್ ಮೂಲಕ ಶುರುವಾಗಿತ್ತು ಪ್ರೇಮಕಹಾನಿ: ಘೋಣಸಗಿ ಗ್ರಾಮದ ಮಲ್ಲಿಕಾರ್ಜುನ ಜಮಖಂಡಿ ದ್ವೀತಿಯ ಬಿಎ ವಿದ್ಯಾರ್ಥಿಯಾಗಿದ್ದನು. ನಿತ್ಯ ಬಸ್ನಲ್ಲಿ ಕಾಲೇಜ್ಗೆ ಹೋಗಿ ಬರುವಾಗ ದ್ವೀತಿಯ ಪಿಯುಸಿ ವಿದ್ಯಾರ್ಥಿನಿಯ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರು ಕಾಲೇಜ್ಗೆ ಹೋಗುವ ನೆಪದಲ್ಲಿ ವಿಜಯಪುರದಲ್ಲಿ ಸುತ್ತಾಡುತ್ತಿದ್ದರು. ಈ ವಿಚಾರ ವಿದ್ಯಾರ್ಥಿನಿ ಮನೆಯವರಿಗೆ ಗೊತ್ತಾಗಿತ್ತು. ಇನ್ನೂ ಕಲಿಯುವ ವಯಸ್ಸು ಇದೆ, ಪ್ರೀತಿ ಪ್ರೇಮ ಬಿಡುವಂತೆ ರಾಜಿ ಪಂಚಾಯಿತಿ ನಡೆದಿತ್ತು ಎನ್ನಲಾಗಿದೆ.
ಹಿರಿಯ ಮಾತಿಗೆ ಕಿವಿಗೊಡದ ಇಬ್ಬರು ತಮ್ಮ ಪ್ರೀತಿ ಮುಂದುವರೆಸಿದ್ದರು. ಹೀಗಾಗಿ ವಿದ್ಯಾರ್ಥಿ ಮಲ್ಲಿಕಾರ್ಜುನ ಪೋಷಕರು ಬಾಗಲಕೋಟೆಯ ಬನಹಟ್ಟಿ ಮಿಲಿಟರಿ ಶಾಲೆಗೆ ಆತನನ್ನು ಸೇರಿಸಿದ್ದರು. ಬಾಲಕಿಯ ತಂಟೆಗೆ ಹೋಗಬೇಡ ಎಂದು ಬುದ್ದಿವಾದ ಸಹ ಹೇಳಿದ್ದರು. ಆದರೂ ಇಬ್ಬರು ಮೊಬೈಲ್ನಲ್ಲಿ ಗಂಟಗಟ್ಟಲೆ ಮಾತನಾಡುತ್ತಿದ್ದರು. ಇತ್ತ ಬಾಲಕಿ ತಂದೆ ಗುರುಪ್ಪ ಗಿಡ್ಡನ್ನವರ ಮಗಳಿಗೆ ನೀನು ಪ್ರೀತಿಸಿದ ಹುಡುಗನ ಜತೆ ಮದುವೆ ಮಾಡುವುದಾಗಿ ಹೇಳಿದ್ದರಂತೆ.
ಬಿಎ ಸೆಮಿಸ್ಟರ್ ಪರೀಕ್ಷೆ ಬರೆಯಲು ಬಾಲಕ ಗ್ರಾಮಕ್ಕೆ ವಾಪಸ್ ಬಂದಿದ್ದನು. ಸೆಪ್ಟೆಂಬರ್ 23ರಂದು ರಾತ್ರಿ ಮನೆಯಿಂದ ಬೈಕ್ನಲ್ಲಿ ಹೋದವನು ಏಕಾಏಕಿ ಕಾಣಿಯಾಗಿದ್ದನು. ಇತ್ತ ಬಾಲಕಿಯೂ ಸಹ ಮನೆಯಿಂದ ಕಾಣಿಯಾಗಿದ್ದಳು. ಸಹಜವಾಗಿಯೇ ಇಬ್ಬರು ಓಡಿ ಹೋಗಿದ್ದಾರೆ ಎಂದು ತಿಳಿದುಕೊಂಡು ಬಾಲಕಿಯ ತಂದೆ ಗುರುಪ್ಪ ತನ್ನ ಮಗಳನ್ನು ಮಲ್ಲಿಕಾರ್ಜುನ ಅಪಹರಣ ಮಾಡಿದ್ದಾನೆ ಎಂದು ತಿಕೋಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದೇ ರೀತಿ ಬಾಲಕ ಮಲ್ಲಿಕಾರ್ಜುನ ಪೋಷಕರು ಸಹ ಮಗ ಕಾಣೆಯಾದ ಬಗ್ಗೆ ದೂರು ನೀಡಿದ್ದರು.
ಕೃಷ್ಣಾ ನದಿಯಲ್ಲಿ ಮಲ್ಲಿಕಾರ್ಜುನ್ ಶವ ಪತ್ತೆ: ಎರಡು ದೂರು ಸ್ವೀಕರಿಸಿ ತನಿಖೆ ಕೈಗೊಂಡ ತಿಕೋಟಾ ಪೊಲೀಸ್ ಠಾಣೆ ಪೊಲೀಸರಿಗೆ ಮೊದಲು ಬೀಳಗಿ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 10ರಂದು ಕೃಷ್ಣಾ ನದಿ ತಟದಲ್ಲಿ ಗೋಣಿ ಚೀಲದಲ್ಲಿ ಶವ ಪತ್ತೆಯಾಗಿರುವ ಮಾಹಿತಿ ಸಿಕ್ಕಿತ್ತು. ವಿಚಾರಣೆ ನಡೆಸಿದಾಗ ಆ ಶವ ಮಲ್ಲಿಕಾರ್ಜುನದು ಎಂದು ತಿಳಿಯಿತು. ಪೋಷಕರು ಸಹ ದೃಢಪಡಿಸಿದ್ದರು. ಹಾಗಾದರೆ ಓಡಿ ಹೋಗಿರುವುದಾದರೆ ಬಾಲಕಿ ಎಲ್ಲಿ ಎನ್ನುವ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ ಬಾಲಕಿ ಕುಟುಂಬದವರು ತಮ್ಮ ಮಗನನ್ನು ಕೊಲೆ ಮಾಡಿರಬಹುದು ಎಂದು ಬಾಲಕನ ಪೋಷಕರು ಆರೋಪ ಮಾಡಿದ್ದಾರೆ.
ಬಾಲಕಿಯ ಪೋಷಕರು ಸ್ಥಿತಿವಂತರಾಗಿದ್ದು, ತಮ್ಮ ಮಗಳನ್ನು ಮುಚ್ಚಿಟ್ಟು, ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ್ ಪೋಷಕರು ಆರೋಪಿಸಿದ್ದಾರೆ. ಕೊಲೆ ಪ್ರಕರಣ ಸಂಬಂಧ ಸದ್ಯ ಬಾಲಕಿಯ ತಂದೆ ಗುರಪ್ಪ ಹಾಗೂ ಮಾವ ಅಜೀತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಬಾಲಕಿಯನ್ನೂ ಸಹ ಕೊಲೆ ಮಾಡಲಾಗಿದೇಯಾ?: ಆದರೆ ಪೊಲೀಸರ ವಿಚಾರಣೆ ವೇಳೆ ಬಾಲಕಿಯನ್ನು ಸಹ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಸದ್ಯ ಬಾಲಕನ ಶವ ಮಾತ್ರ ಪತ್ತೆಯಾಗಿದ್ದು, ಇಲ್ಲಿಯವರೆಗೆ ಬಾಲಕಿ ಪತ್ತೆಯಾಗಿಲ್ಲ. ಈ ಪ್ರಕರಣವನ್ನು ಬೀಳಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಕೆಯನ್ನು ಸಹ ಕೊಲೆ ಮಾಡಲಾಗಿದ್ದರೆ ಬಾಲಕಿ ಶವ ಸಹ ದೊರೆಯಬೇಕಾಗಿತ್ತು. ಇಲ್ಲಿಯವರೆಗೆ ಬಾಲಕಿಯ ಸುಳಿವೂ ಸಹ ಪೊಲೀಸರಿಗೆ ಪತ್ತೆಯಾಗದ ಕಾರಣ ಆಕೆ ಕೊಲೆಯಾಗಿದೆ ಎನ್ನುವದು ಸದ್ಯ ಪೊಲೀಸರು ನಂಬುತ್ತಿಲ್ಲ. ಬಾಲಕಿಯನ್ನು ಕೊಲೆ ಮಾಡಲಾಗಿದೆಯೋ.. ಇಲ್ಲವೋ.. ಎನ್ನುವದು ತಿಕೋಟಾ ಪೊಲೀಸರು ನಡೆಸುವ ತನಿಖೆಯಿಂದ ಮಾತ್ರ ಹೊರಬರಲಿದೆ.
ಓದಿ: ಮರ್ಯಾದಾ ಹತ್ಯೆ: ಅಕ್ಕನ ಕತ್ತು ಹಿಸುಕಿ, ಆಕೆಯ ಪ್ರಿಯಕರನಿಗೆ ಗುಂಡಿಕ್ಕಿದ ಅಪ್ರಾಪ್ತ ತಮ್ಮ