ಮುದ್ದೇಬಿಹಾಳ : ಗ್ರಾಮ ಪಂಚಾಯಿತ್ ಚುನಾವಣೆಯಲ್ಲಿ ಮೂವರು ಬಿಜೆಪಿ ಬೆಂಬಲಿತ ಸದಸ್ಯರನ್ನು ಕಾಂಗ್ರೆಸ್ಸಿಗರು ಹೈಜಾಕ್ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇದು ತಾಲೂಕಿನ ಕಾಳಗಿ ಗ್ರಾಮದಲ್ಲಿ ಸೋಮವಾರ ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿ ಪೊಲೀಸರು ಭಾರಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಪಂಚಾಯತ್ ಕೇಂದ್ರ ಸ್ಥಾನವಾಗಿರುವ ಕಾಳಗಿ ಗ್ರಾಮದವರೇ ಗ್ರಾ.ಪಂಗೆ ಅಧ್ಯಕ್ಷರಾಗಬೇಕು ಎಂಬ ಷರತ್ತನ್ನು ಗ್ರಾಮಸ್ಥರು ವಿಧಿಸಿದ್ದ ಕಾರಣ ಪರ, ವಿರೋಧ ಅಭಿಪ್ರಾಯಗಳು ಕೇಳಿ ಬಂದಿದ್ದವು. ಅಲ್ಲದೇ ಚುನಾವಣೆಗೂ ಮುನ್ನಾ ದಿನ ಗ್ರಾಮಸ್ಥರು ಪಂಚಾಯತ್ ಅಧ್ಯಕ್ಷ ಸ್ಥಾನದ ಕುರಿತು ಚರ್ಚೆ ಮಾಡುವುದಿದೆ ಎಂದು ಡಂಗೂರವನ್ನೂ ಸಾರಿದ್ದರು ಎನ್ನಲಾಗ್ತಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನ ನಿಯೋಜನೆ ಮಾಡಿ ಗ್ರಾಮದಲ್ಲಿನ ಅಹಿತಕರ ವಾತಾವರಣ ತಿಳಿಗೊಳಿಸುವ ಪ್ರಯತ್ನವನ್ನು ಪೊಲೀಸರು ಮಾಡಿದರು. ಸಿಪಿಐ ಆನಂದ ವಾಘಮೋಡೆ, ಪಿಎಸ್ಐ ಮಲ್ಲಪ್ಪ ಮಡ್ಡಿ, ಇಬ್ಬರು ಎಎಸ್‌ಐಗಳು, ಡಿಆರ್ ವಾಹನದ ಸಿಬ್ಬಂದಿ,15ಕ್ಕೂ ಹೆಚ್ಚು ಪೊಲೀಸರು ಭದ್ರತೆಯ ಜವಾಬ್ದಾರಿ ವಹಿಸಿದ್ದರು.
ಓದಿ : ಇಂದು ಸಭಾಪತಿ ಸ್ಥಾನಕ್ಕೆ ಚುನಾವಣೆ... ಹೊರಟ್ಟಿ ಬೆಂಬಲಿಸಲು ಬಿಜೆಪಿ ಸದಸ್ಯರಿಗೆ ಸಿಎಂ ಸೂಚನೆ
ಚುನಾವಣೆ ಬಳಿಕವೂ ಗ್ರಾಮದಲ್ಲಿ ವಾತಾವರಣ ಬೂದಿಮುಚ್ಚಿದ ಕೆಂಡದಂತಿದೆ. ಆಯ್ಕೆಯಾಗಿರುವ ಕಾಳಗಿ ಸದಸ್ಯರು ಕಾಂಗ್ರೆಸ್ ಬೆಂಬಲಿತರಾಗಿ ಗುರುತಿಸಿಕೊಂಡಿದ್ದು, ಅವರು ಊರೊಳಗೆ ಹೋಗಲು ಗ್ರಾಮಸ್ಥರಿಂದ ಬೆದರಿಕೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ. ಏತನ್ಮಧ್ಯೆ ಗ್ರಾಮದಲ್ಲಿ ಚುನಾವಣೆ ಫಲಿತಾಂಶದ ಬಳಿಕ ಆಕ್ರೋಶಗೊಂಡಿರುವ ಗ್ರಾಮಸ್ಥರನ್ನು ಪೊಲೀಸರು ಊರೊಳಗೆ ಕಳಿಸಿದರು. ಅಲ್ಲದೇ ಗುಂಪು ಗುಂಪಾಗಿದ್ದ ಜನರನ್ನು ಪೊಲೀಸರ ವಾಹನದ ಸೈರನ್ ಹಾಕಿ ಚದುರಿಸಿದರು.