ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕಿನಾದ್ಯಂತ ಭಾನುವಾರ ತಡರಾತ್ರಿ ಭಾರೀ ಮಳೆ ಸುರಿದಿದೆ.
ಭಾನುವಾರ ತಡರಾತ್ರಿ ಸುರಿದ ಮಳೆಯಿಂದಾಗಿ ನಾಲತವಾಡ ಪಟ್ಟಣದಲ್ಲಿ ಮನೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದಾಗಿ ಸೇತುವೆ ಮುಳುಗಡೆಯಾದ ಪರಿಣಾಮ ಮುದ್ದೇಬಿಹಾಳ ತಾಲೂಕಿನ ಅಡವಿ ಹುಲಗಬಾಳದಿಂದ ಅಡವಿ ಹುಲಗಬಾಳ ತಾಂಡಾಕ್ಕೆ ಸಂಪರ್ಕಿಸುವ ರಸ್ತೆಯ ಸಂಪರ್ಕ ಕಡಿತಗೊಂಡಿದೆ.
ಸೇತುವೆಗಳ ಮೇಲೆ ಸುಮಾರು ಎರಡ್ಮೂರು ಅಡಿಯಷ್ಟು ನೀರು ಹರಿದಿದ್ದು, ಎಸ್ಎಸ್ಎಲ್ಸಿ ಪರೀಕ್ಷೆಗೆ ಹೋಗಲು ವಿದ್ಯಾರ್ಥಿಗಳು ಪರದಾಡಿದ್ದಾರೆ. ಬಳಿಕ ಗ್ರಾಮಸ್ಥರ ಸಹಾಯದಿಂದ ಪರೀಕ್ಷೆಗೆ ತೆರಳಿದ್ದಾರೆ. ಆದರೆ ವಾಪಸ್ ಬರುವಾಗ ನೀರು ಮತ್ತಷ್ಟು ಹೆಚ್ಚಾಗಿದ್ದರಿಂದ ವಿದ್ಯಾರ್ಥಿಗಳು ತಾಳಿಕೋಟೆಯಲ್ಲಿಯೇ ಉಳಿಯಬೇಕಾಗಿದೆ. ಇನ್ನೊಂದೆಡೆ ತಾಲೂಕಿನ ನಾಲತವಾಡ ಪಟ್ಟಣದ ಕಾಲೋನಿಗಳಲ್ಲಿ ನೀರು ನುಗ್ಗಿದ್ದು, ರಸ್ತೆ ಮೇಲೆ ಹರಿದ ಹಳ್ಳದ ನೀರು ಜಮೀನುಗಳಿಗೂ ನುಗ್ಗಿದೆ.
ತಾಳಿಕೋಟೆ ತಾಲೂಕಿನಲ್ಲಿಯೂ ಮಳೆಯ ಆರ್ಭಟ ಜೋರಾಗಿತ್ತು. ತಾಳಿಕೋಟೆ ತಾಲೂಕಿನ ಹಡಗಿನಾಳ ಗ್ರಾಮದದಲ್ಲಿ ಜಮೀನುಗಳಿಗೆ ನೀರು ನುಗ್ಗಿದ್ದು, ಹೆಸರು, ತೊಗರಿ ಸೇರಿದಂತೆ ಇತರೆ ಬೆಳೆಗಳು ಜಲಾವೃತವಾಗಿವೆ. ಇದರ ಜೊತೆ ಇಂಡಿ, ಸಿಂದಗಿ, ಬಸವನಬಾಗೇವಾಡಿ ಭಾಗದಲ್ಲಿಯೂ ಉತ್ತಮ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಹ ಸಿದ್ಧತೆ ಆರಂಭಿಸಿದೆ.
ಭಾನುವಾರ ತಡರಾತ್ರಿ ನಾಲತವಾಡದಲ್ಲಿ 97 ಮಿ.ಮೀ., ಮುದ್ದೇಬಿಹಾಳ 46 ಮಿ.ಮೀ.. ಇಂಡಿ 36 ಮಿ.ಮೀ., ಸಿಂದಗಿ 40 ಮಿ.ಮೀ., ದೇವರ ಹಿಪ್ಪರಗಿ 35 ಮಿ.ಮೀ. ಹಾಗೂ ವಿಜಯಪುರ ನಗರದಲ್ಲಿ 8 ಮಿ.ಮೀ. ಮಳೆಯಾಗಿದೆ.