ವಿಜಯಪುರ: ಗಂಟಲು ದ್ರವದ ಮಾದರಿಯನ್ನೇ ಪರೀಕ್ಷೆಗೆ ನೀಡದ ವ್ಯಕ್ತಿಗೆ ಅಧಿಕಾರಿಗಳು ಕರೆ ಮಾಡಿ ನಿಮ್ಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.
ಜಾಲಿಗೇರಿ ಗ್ರಾಮದ ಸಂಜು ಎಂಬುವರಿಗೆ ಬುಧವಾರ ಸಂಜೆ 4 ಗಂಟೆಗೆ ಜಾಲಿಗೇರಿ ಗ್ರಾಮ ಲೆಕ್ಕಾಧಿಕಾರಿ ಫೋನ್ ಕರೆ ಮೂಲಕ ನಿಮ್ಗೆ ಕೋವಿಡ್ ಪಾಸಿಟಿವ್ ಇದೆ. 7 ದಿನಗಳ ಕಾಲ ಹೋಂ ಕ್ವಾರಂಟೈನ್ ಆಗಿ ಎಂದು ತಿಳಿಸಿದ್ದಾರೆ. ಸುದ್ದಿ ತಿಳಿದು ಕಂಗಾಲಾದ ಯುವಕ, ಮೇಲಾಧಿಕಾರಿಗಳನ್ನು ಸಂಪರ್ಕಿಸಿ ನಾನು ಗಂಟಲು ದ್ರವ ಪರೀಕ್ಷೆ ಮಾಡಿಸದಿದ್ದರೂ, ಹೇಗೆ ಸೋಂಕಿತನಾಗಲು ಸಾಧ್ಯವೆಂದು ಪ್ರಶ್ನಿಸಿದ್ದಾರೆ.
ಹೀಗಾಗಿ ಒಬ್ಬರ ಮೇಲೊಬ್ಬರು ಹಾಕಿ ಕೈ ತೊಳೆದುಕೊಳ್ಳುವ ಪ್ರಯತ್ನ ಅಧಿಕಾರಿಗಳು ಮಾಡಿದ್ದಾರೆ ಎಂದು ಸಂಜು ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಆರೋಗ್ಯಾಧಿಕಾರಿಗಳು ನನಗೆ ಕರೆ ಮಾಡಿ ಪಾಸಿಟಿವ್ ಇದೆ ಎಂದು ಹೇಗೆ ಹೇಳಿದ್ರು ಎಂದು ಜಿಲ್ಲಾಡಳಿಕ್ಕೆ ಪ್ರಶ್ನಿಸುತ್ತಿದ್ದಾರೆ.
ಆರೋಗ್ಯ ಇಲಾಖೆ ಎಡವಟ್ಟಿನಿಂದ, ಗಂಟಲು ದ್ರವದ ಪರೀಕ್ಷೆ ಮಾಡಿಸದೆ ಹೀಗೆ ಫೋನ್ ಮೂಲಕ ಪಾಸಿಟಿವ್ ಎಂದು ಹೇಳುತ್ತಿರುವುದು ಅನೇಕ ಜನರಿಗೆ ಭಯ ಹುಟ್ಟಿಸಿದೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಯುವಕ ಒತ್ತಾಯಿಸಿದ್ದಾರೆ.