ಮುದ್ದೇಬಿಹಾಳ: ರಸ್ತೆ ಸಮಸ್ಯೆ ಬಗೆಗಿನ ಜನ ಪ್ರತಿನಿಧಿಗಳ ಆಶ್ವಾಸನೆ, ಹುಸಿ ಭರವಸೆಗಳಿಂದ ಬೇಸತ್ತ ಗ್ರಾಮಸ್ಥರು ಹಾಗೂ ಹಾಲುಮತ ಸಮಾಜದ ಮುಖಂಡರು ತಾಲೂಕಿನ ಸರೂರ-ಅಗತೀರ್ಥ ಹಾಲುಮತ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿಗಳ ನೇತೃತ್ವದಲ್ಲಿ ತಾಲೂಕಿನ ಅಡವಿ ಹುಲಗಬಾಳದ ಬೀರಪ್ಪನ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಗೆ ಚಾಲನೆ ನೀಡುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ರಸ್ತೆ ಸಮಸ್ಯೆ:
ಕಳೆದ 20 ವರ್ಷಗಳಿಂದ ತಾಲೂಕಿನ ಅಡವಿ ಹುಲಗಬಾಳ ಗ್ರಾಮದಲ್ಲಿ ಪ್ರತಿ ವರ್ಷದ ದೀಪಾವಳಿ ಪಾಡ್ಯದ ದಿನದಂದು ನಡೆದುಕೊಂಡು ಬರುತ್ತಿರುವ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಬರಲು ಇಲ್ಲಿ ರಸ್ತೆ ವ್ಯವಸ್ಥೆ ಇಲ್ಲ.
ಇದನ್ನು ಮನಗಂಡ ಜಾತ್ರೆಯ ನೇತೃತ್ವ ವಹಿಸುವ ಜಿ.ಪಂ. ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ ಅವರು ಹಲವಾರು ಬಾರಿ ಸಮಾರಂಭಕ್ಕೆ ಆಗಮಿಸುವ ಸಚಿವರಿಗೆ, ಶಾಸಕರುಗಳಿಗೆ ತಿಳಿಸಿದ್ದರು. ಆದರೆ ರಾಜಕಾರಣಿಗಳು ರಸ್ತೆ ಮಾಡಿಸುವುದಾಗಿ ಕೇವಲ ಭರವಸೆ ನೀಡುತ್ತಲೇ ಬಂದರು.
ರಸ್ತೆ ದರಸ್ತಿಗೆ ಶ್ರೀಗಳ ಭರವಸೆ:
ಕಳೆದ ವರ್ಷ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಹಾಲುಮತ ಗುರುಪೀಠದ ಶಾಂತಮಯ ಶ್ರೀಗಳು, ಈ ವರ್ಷ ರಸ್ತೆ ಮಾಡದಿದ್ದರೆ ಸ್ವತಃ ತಾವೇ ಭಕ್ತರೊಂದಿಗೆ ಸಲಿಕೆ, ಗುದ್ದಲಿ ಹಿಡಿದು ರಸ್ತೆ ದುರಸ್ತಿ ಮಾಡಿಸುವುದಾಗಿ ಬಹಿರಂಗವಾಗಿ ಘೋಷಿಸಿದ್ದರು.
ರಸ್ತೆ ದುರಸ್ತಿಗೆ ಚಾಲನೆ:
ಅದರಂತೆ ಈ ವರ್ಷ ಬೀರಪ್ಪನ ಬೆಟ್ಟಕ್ಕೆ ಹೋಗುವ ರಸ್ತೆಯ ದುರಸ್ತಿಯ ಬಗ್ಗೆ ಯಾವೊಬ್ಬ ನಾಯಕರು ತಲೆ ಕೆಡಿಸಿಕೊಳ್ಳದ ಕಾರಣ, ಕುರುಬ ಸಮಾಜದ ಮುಖಂಡರನ್ನು ಒಗ್ಗೂಡಿಸಿದ ಸ್ವಾಮೀಜಿ ತಾವೇ ಕೈಯಲ್ಲಿ ಗುದ್ದಲಿ ಹಿಡಿದು ರಸ್ತೆ ದುರಸ್ತಿಗೆ ಚಾಲನೆ ನೀಡಿದ್ದಾರೆ.