ವಿಜಯಪುರ :ಬೇಸಿಗೆ ಉರಿ ಬಿಸಿಲು ಹೆಚ್ಚುತ್ತಿದ್ದು, ಇನ್ನೊಂದು ಕಡೆ ಲೋಕಸಭೆ ಚುನಾವಣೆಯ ಕಾವು ಏರುತ್ತಿದೆ. ಜಿಲ್ಲೆಯಲ್ಲಿ ಸದ್ಯ 48 ಡಿಗ್ರಿ ತಾಪಮಾನವಿದ್ದು ಜನ ಹೊರಗಡೆ ಕಾಲಿಡಲೂ ಹಿಂದೆ-ಮುಂದೆ ನೋಡುತ್ತಿದ್ದಾರೆ.
ಇಂಥ ವೇಳೆ ಟ್ರಾಫಿಕ್ ಸಿಗ್ನಲ್ ಕಿರಿಕಿರಿ ವಾಹನ ಸವಾರರನ್ನು ಹೈರಾಣು ಮಾಡುತ್ತಿದೆ. ಬೇಸಿಗೆಯಲ್ಲಿ ಸಿಗ್ನಲ್ಫ್ರೀಮಾಡಬೇಕೆಂದು ಪೊಲೀಸ್ ಇಲಾಖೆಗೆ ಸವಾರರು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ನಡುವೆ ವಾಹನ ಸವಾರರ ಸಹಾಯಕ್ಕೆ ವಿಜಯಪುರ ಮಹಾನಗರ ಪಾಲಿಕೆ ಮುಂದಾಗಿದ್ದು ಹೆಚ್ಚು ಬಿಸಿಲು ತಾಗುವ ರಸ್ತೆಗೆ ಹಸಿರು ಹೊದಿಕೆ ಹಾಕಲು ಮುಂದಾಗಿದೆ.
ಪ್ರಾಯೋಗಿಕವಾಗಿ ಗಾಂಧಿವೃತ್ತದ ಮುಖ್ಯರಸ್ತೆಯಾಗಿರುವ ತ್ರಿಪುರಸುಂದರಿ ಚಿತ್ರಮಂದಿರ ರಸ್ತೆಯಿಂದ ಗಾಂಧಿವೃತ್ತದ ಟ್ರಾಫಿಕ್ ಸಿಗ್ನಲ್‌ವರೆಗೆ ಸುಮಾರು ಅರ್ಧ ಕಿ.ಮೀ ರಸ್ತೆಗೆ ಹಸಿರು ಹೊದಿಕೆ ಹಾಕಿದೆ. ಇದು ವಾಹನ ಸವಾರರ ನೆಮ್ಮದಿಗೆ ಕಾರಣವಾಗಿದೆ. ಟ್ರಾಫಿಕ್ ಸಿಗ್ನಲ್ ಬಿದ್ದಾಗ ಗರಿಷ್ಠ 3 ನಿಮಿಷದವರೆಗೆ ವಾಹನ ಸವಾರರು ಬಿಸಿಲಿನಲ್ಲಿ ಕಾಯಬೇಕಾಗುತ್ತಿದೆ. ಇದರಿಂದ ಹಲವು ಜನ ಮೂರ್ಛೆ ಹೋದ ಘಟನೆಗಳೂ ನಡೆದಿವೆ.
ಸಿಗ್ನಲ್‌ನಲ್ಲಿ ನಿಂತಾಗ ಕುಡಿವ ನೀರು ಸಿಗುವುದಿಲ್ಲ ನೆತ್ತಿಯ ಮೇಲಿನ ಕೆಂಡದಂತ ಬಿಸಿಲು ಎಂಥಾ ಸವಾರನಾದರೂ ಪರಿತಪಿಸದೇ ಇರುವುದಿಲ್ಲ. ಹೀಗಾಗಿ ರಸ್ತೆಗೆ ಹಸಿರು ಹೊದಿಕೆ ಹಾಕಿರುವ ಕಾರಣ ಸವಾರ ಕೆಲ ಹೊತ್ತು ಸಿಗ್ನಲ್ ನಲ್ಲಿ ನೆಮ್ಮದಿಯಿಂದ ಉಸಿರಾಡಬಹುದಾಗಿದೆ. ಮಹಾನಗರ ಪಾಲಿಕೆಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಹಸಿರು ಹೊದಿಕೆ ಅಳವಡಿಸಲು ಈಗಾಗಲೇ ಮಹಾನಗರ ಪಾಲಿಕೆ 50ಸಾವಿರ ರೂ. ವೆಚ್ಚ ಮಾಡಿದೆ. ಮುಂದಿನ 15 ದಿನಗಳಲ್ಲಿ ನಗರದ ಹಲವು ಕಡೆಗಳಲ್ಲಿ ಹಸಿರು ಹೊದಿಕೆ ಹಾಕುವ ಯೋಜನೆ ರೂಪಿಸಿದೆ. ರಾಜ್ಯದಲ್ಲಿ ಇದೇ ಮೊದಲು ರಸ್ತೆಗೆ ಹಸಿರು ಹೊದಿಕೆ ಹಾಕಿದ್ದು, ಮುಂದಿನ ದಿನಗಳಲ್ಲಿ ಇದು ಬೇರೆ ಜಿಲ್ಲೆಗೂ ಮಾದರಿಯಾದೆರ ಅಚ್ಚರಿಯಿಲ್ಲ.