ಹುಬ್ಬಳ್ಳಿ: ರಾಜ್ಯದ ಸರ್ವತೋಮುಖ ಅಭಿವೃದ್ದಿಗಾಗಿ ರಾಜ್ಯ ಸರ್ಕಾರ ಪ್ರತಿವರ್ಷವೂ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡುತ್ತೆ. ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರು ದುಂಬಾಲು ಬಿದ್ದು ಹಣ ಬಿಡುಗಡೆ ಮಾಡಿಸಿಕೊಂಡು ಬರುತ್ತಾರೆ. ಆದರೆ, ಈ ಕ್ಷೇತ್ರದ ಅಭಿವೃದ್ದಿಗೆ ಬಿಡುಗಡೆಯಾಗಿದ್ದ ಅನುದಾನವನ್ನ ರಾಜ್ಯ ಸರ್ಕಾರ ಇದೀಗ ವಾಪಸ್ ಪಡೆದು ಕ್ಷುಲ್ಲಕ ರಾಜಕೀಯ ಮಾಡುತ್ತಿರುವುದಕ್ಕೆ ಸ್ವತ ಶಾಸಕರೇ ಅಸಮಾಧಾನಗೊಂಡಿದ್ದಾರೆ.
ಹುಬ್ಬಳ್ಳಿ - ಧಾರವಾಡ ಅವಳಿ ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರೋ ನಗರ. ರಾಜ್ಯದ ರಾಜಧಾನಿ ಬೆಂಗಳೂರು ಹೊರತು ಪಡಿಸಿದರೆ ವಾಣಿಜ್ಯ ನಗರಿ ಹುಬ್ಬಳ್ಳಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರೋ ಸಿಟಿ ಕೂಡ ಹೌದು. ಆದರೆ, ಆ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿ ವಿಚಾರದಲ್ಲಿ ರಾಜ್ಯ ಸರ್ಕಾರ ತಳೆದಿರೋ ನಡೆಯಿಂದಾಗಿ ಸ್ಥಳೀಯ ಶಾಸಕರಿಂದಲೇ ಅಸಮಾಧಾನ ವ್ಯಕ್ತವಾಗಿದೆ.
ಹುಬ್ಬಳ್ಳಿ ಅಭಿವೃದ್ಧಿ ಅನುದಾನ ಹಿಂಪಡೆದ ಸರ್ಕಾರ : ಹೌದು, ಹುಬ್ಬಳ್ಳಿ ಪೂರ್ವ ವಿಧಾನ ಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗಾಗಿ ಮೀಸಲಿಟ್ಟಿದ್ದ ಬರೋಬ್ಬರಿ 90 ಕೋಟಿ ರೂ. ಅನುದಾನವನ್ನ ರಾಜ್ಯ ಸರ್ಕಾರ ಹಿಂಪಡೆದು ಬೇರೊಂದು ಕಾಮಗಾರಿಗೆ ವರ್ಗಾವಣೆ ಮಾಡಿರೋ ಬಗ್ಗೆ ಸ್ವತ ಶಾಸಕರೇ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ದುರ್ಗದ ಬೈಲ್ ಹಾಗೂ ಗಾಂಧಿ ಮಾರುಕಟ್ಟೆ ಅಭಿವೃದ್ದಿಗಾಗಿ ಬಿಡುಗಡೆಯಾಗಿದ್ದ ಬರೋಬ್ಬರಿ 90 ಕೋಟಿ ರೂ. ಅನುದಾನವನ್ನ ಉದ್ದೇಶಪೂರ್ವಕವಾಗಿ ಹಿಂಪಡೆದು ಬೇರೊಂದು ಕಾಮಗಾರಿಗಾಗಿ ವರ್ಗಾವಣೆ ಮಾಡಲಾಗಿದೆ ಎಂದು ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಪ್ರಮುಖವಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ನೂರಾರು ಕೋಟಿ ಅನುದಾನ ಬಿಡುಗಡೆಯಾಗಿದೆ. ಅಲ್ಲದೇ ಈ ನಿಟ್ಟಿನಲ್ಲಿ ಅವಳಿ ನಗರದ ವಿವಿಧ ಪ್ರದೇಶಗಳಲ್ಲಿ ಅಭಿವೃದ್ದಿ ಕಾಮಗಾರಿಗಳೂ ನಡೆದಿವೆ.
ಆದರೆ, ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದುರ್ಗದ ಬೈಲ್ ಹಾಗೂ ಗಾಂಧಿ ಮಾರುಕಟ್ಟೆಯ ಸರ್ವತೋಮುಖ ಅಭಿವೃದ್ದಿಗಾಗಿ ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿದ್ದ 90 ಕೋಟಿ ರೂ, ಅನುದಾನವನ್ನ ಏಕಾಏಕಿ ವಾಪಸ್ ಪಡೆದು ಬೇರೊಂದು ಕಾಮಗಾರಿಯ ನೆಪದಲ್ಲಿ ವರ್ಗಾವಣೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ತಾವು ಕಾಂಗ್ರೆಸ್ ನಿಂದ ಪ್ರತಿನಿಧಿಸುತ್ತಿರೋ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಈ ರೀತಿ ಅನುದಾನದ ವಿಚಾರದಲ್ಲಿ ದ್ವಂದ್ವ ನೀತಿ ಅನುಸರಿಸುವ ಮೂಲಕ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ಈ ನಡೆ ವಿರುದ್ಧ ಶಾಸಕ ಪ್ರಸಾದ ಅಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.