ವಿಜಯಪುರ: ವಿಜಯಪುರ ನಗರ ಇಂದು ಅಪರೂಪದ ಮದುವೆಯೊಂದಕ್ಕೆ ಸಾಕ್ಷಿಯಾಯಿತು. ಸರ್ಕಾರಿ ನೌಕರನೊಬ್ಬ ಪ್ರೀತಿಸಿದ ಯುವತಿ ಅಂಗವೈಕಲ್ಯತೆ ಹೊಂದಿದ್ದರೂ ಆಕೆಗೆ ಬಾಳು ಕೊಡುವ ಮೂಲಕ ಮಾದರಿಯಾಗಿದ್ದಾನೆ.
ಯಾದಗಿರಿ ಜಿಲ್ಲೆ ಹುಣಸಗಿ ಗ್ರಾಮದ ಭಾಗಪ್ಪ ಎಂಬಾತನಿಗೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತರೂರ ಗ್ರಾಮದ ರೇಣುಕಾ ಫೋನ್ ಮೂಲಕ ಪರಿಚಯವಾಗಿದ್ದರು. ಈ ಪರಿಚಯ ಮುಂದೆ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು. ಈ ಮಧ್ಯೆ ಯುವಕ ಭಾಗಪ್ಪನಿಗೆ ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ ಸರ್ಕಾರಿ ನೌಕರಿ ಸಿಕ್ಕಿದೆ. ಆದರೆ ಆತನಿಗೆ ತಾನು ಪ್ರೀತಿಸುತ್ತಿರುವ ಯುವತಿ ಅಂಗವೈಕಲ್ಯ ಹೊಂದಿದ್ದಾಳೆ ಎಂಬುದು ನಂತರ ಗೊತ್ತಾಗಿದೆ. ಆದರೂ ಆಕೆಯನ್ನು ದೂರ ಮಾಡದೆ ಬಾಳು ಕೊಡುವ ನಿರ್ಧಾರಕ್ಕೆ ಬಂದಿದ್ದಾನೆ.
ರೇಣುಕಾಳನ್ನು ಮದುವೆಯಾಗಲು ಭಾಗಪ್ಪ ತನ್ನ ಮನೆಯವರನ್ನು ಒಪ್ಪಿಸಿದ್ದಾನೆ. ಆದರೆ ಯುವತಿಯ ಜಾತಿ ಬೇರೆ ಆಗಿದ್ದ ಕಾರಣ ಆಕೆಯ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಸಮಾಜ ಸೇವಕ ಪ್ರಭು ಕಣಮೇಶ್ವರ ಎಂಬಾವರಿಗೆ ಕರೆ ಮಾಡಿ ತಮ್ಮ ಪ್ರೀತಿಯ ಕುರಿತು ಹೇಳಿದ್ದರು. ತಾವಿಬ್ಬರೂ ಪ್ರೀತಿಸುತ್ತಿದ್ದೇವೆ. ತಮಗೆ ಮದುವೆ ಮಾಡಿಸಿ ಎಂದು ಭಾಗಪ್ಪ ಮನವಿ ಮಾಡಿದ್ದ. ಇಂದು ಸಮಾಜ ಸೇವಕ ಪ್ರಭು ಕಣಮೇಶ್ವರ ಇಬ್ಬರು ಪ್ರೇಮಿಗಳನ್ನು ಕರೆದು ಅವರ ಕುಟುಂಬದವರ ಜತೆ ಮಾತನಾಡಿ ವಿಜಯಪುರ ನಗರದ ಅಂಬೇಡ್ಕರ್ ಭವನದಲ್ಲಿ ಸರಳವಾಗಿ ಮದುವೆ ಮಾಡಿಸಿದರು.
ತಾನು ಪ್ರೀತಿ ಮಾಡಿದ ರೇಣುಕಾ ನನಗೆ ಸಿಕ್ಕಿದ್ದಾಳೆ. ನಾನು ಸರ್ಕಾರಿ ನೌಕರಿಯಲ್ಲಿದ್ದು, ನಾವಿಬ್ಬರೂ ಬೆಂಗಳೂರಿಗೆ ಹೋಗಿ ಅಲ್ಲೇ ಜೀವನ ಸಾಗಿಸುತ್ತೇವೆ ಎಂಬ ಆತ್ಮವಿಶ್ವಾಸವನ್ನು ಭಾಗಪ್ಪ ವ್ಯಕ್ತಪಡಿಸಿದ್ದು, ಮದುವೆಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.