ಮುದ್ದೇಬಿಹಾಳ : ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಅವರ ಎಡೆ ಬಿಡದ ಪ್ರಯತ್ನದ ಫಲವಾಗಿ ಬೇರೆ ಬೇರೆ ಇಲಾಖೆಗಳೆಲ್ಲ ಸೇರಿ ಮುದ್ದೇಬಿಹಾಳ ಮತಕ್ಷೇತ್ರಕ್ಕೆ 600 ಕೋಟಿ ರೂ.ಗಳ ಅನುದಾನವನ್ನು ಸಿಎಂ ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದೆ ಎಂದು ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಇಲಾಖೆಯ ಸಚಿವ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಲೋಕೋಪಯೋಗಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಸರ್ಕಲ್ನಿಂದ ಅಗಸಬಾಳ ಕ್ರಾಸ್‌ವರೆಗಿನ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ, ಅಂಬೇಡ್ಕರ್ ಸಮುದಾಯ ಭವನ, ಎಪಿಎಂಸಿ ಸಭಾಭವನ ಹಾಗೂ ಹುನಗುಂದ-ತಾಳಿಕೋಟಿ ರಸ್ತೆಯ ಲೋಕಾರ್ಪಣೆ ಸಮಾರಂಭವನ್ನು ಗೋವಿಂದ ಕಾರಜೋಳ ಉದ್ಘಾಟಿಸಿ ಮಾತನಾಡಿದರು.
ಬಿಹಾರ್ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಕಾರಣ ಶೇ.75ರಷ್ಟು ಬಿಹಾರದಲ್ಲಿ ಹೆಣ್ಣುಮಕ್ಕಳು, ಯುವಕರು ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಸಾಮಾಜಿಕ ನ್ಯಾಯವನ್ನು ಕೊಡುವ ಆಡಳಿತವನ್ನು ಪ್ರಧಾನಿ ಮೋದಿ, ಯಡಿಯೂರಪ್ಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಅನುದಾನಕ್ಕೆ ಬೇಡಿಕೆ ಸಲ್ಲಿಸಿದ ಶಾಸಕ ನಡಹಳ್ಳಿ : ಮುದ್ದೇಬಿಹಾಳದಲ್ಲಿ ಬಹುತೇಕ ಸರ್ಕಾರಿ ಇಲಾಖೆಯ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಪಟ್ಟಣದ ಹೃದಯ ಭಾಗವಾಗಿರುವ ಬಸವೇಶ್ವರ ಸರ್ಕಲ್ ಬಳಿ ಏಳೆಂಟು ಎಕರೆ ವಿಶಾಲವಾದ ಜಾಗ ಇದ್ದು, ಅಲ್ಲಿ ಸರ್ಕಾರಿ ಕಟ್ಟಡಗಳ ಸಮುಚ್ಛಯ ನಿರ್ಮಾಣಕ್ಕೆ ಈ ವರ್ಷವೇ 10 ಕೋಟಿ ರೂ. ಮಂಜೂರಾತಿ ಮಾಡಲು ಡಿಸಿಎಂ ಕಾರಜೋಳರಿಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಬೇಡಿಕೆ ಮುಂದಿಟ್ಟರು.
ಲೋಕೋಪಯೋಗಿ ಇಲಾಖೆಯ ಇಇ ಬಿ.ಬಿ.ಪಾಟೀಲ ಮಾತನಾಡಿ, ಡಿಸಿಎಂ ಕಾರಜೋಳ ಅವರು ಮುದ್ದೇಬಿಹಾಳ ಕ್ಷೇತ್ರಕ್ಕೆ 31 ಕೋಟಿ ರೂ.ಬಿಡುಗಡೆ ಮಾಡಿದ್ದು, ಇದರಲ್ಲಿ ರಾಜ್ಯ ಹೆದ್ದಾರಿ ಶಿರಾಡೋಣ ಲಿಂಗಸುಗೂರು ರಸ್ತೆ ಮುದ್ದೇಬಿಹಾಳದಿಂದ ಅಗಸಬಾಳ ಕ್ರಾಸ್‌ವರೆಗೆ 15.50ಕಿಮೀ ರಸ್ತೆ 2019-20,2020-21ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾಳಾಗಿತ್ತು. ಈ ಏಳು ಮೀಟರ್ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.
1.50 ಕಿ.ಮೀವರೆಗಿನ ಮುದ್ದೇಬಿಹಾಳದ ಅಂಬೇಡ್ಕರ್ ಸರ್ಕಲ್ನಿಂದ ಬಿದರಕುಂದಿಯ ಹಳ್ಳದವರೆಗೆ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಹಿರೇಮುರಾಳ, ನಾಗರಬೆಟ್ಟ ಬಳಿ ಕುಸಿದಿದ್ದ ಸೇತುವೆಯನ್ನು ದುರಸ್ಥಿ ಮಾಡಲಾಗುತ್ತದೆ ಎಂದು ಹೇಳಿದರು.