ವಿಜಯಪುರ : ವಿಶಾಲ ನಿವೇಶನ ,ಬೃಹತ ಕಟ್ಟಡ, ಆದರೆ ಈ ಆಸ್ಪತ್ರೆಗೆ ವೈದ್ಯರ ಬರ, ಹೀಗೆ ಗ್ರಾಮೀಣ ಭಾಗದವರ ಪಾಲಿಗೆ ಆಪತ್ಭಾಂದವ ಆಗಬೇಕಾಗಿದ್ದ ಸರಕಾರಿ ಆಸ್ಪತ್ರೆಯ ದುಸ್ಥಿತಿಯ ಚಿತ್ರಣವಿದು. ಇದೀಗ ಈ ಆಸ್ಪತ್ರೆ ರೋಗಿಯು ಬಾರದೆ, ವೈದ್ಯರು ಬಾರದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಹೌದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೋಳೂರು ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಕಿರಿಯ ಮಹಿಳಾ ಆರೋಗ್ಯ ಉಪಕೇಂದ್ರದ ಕಥೆ ಇದು. ಸುಮಾರು ಐದಾರು ಹಳ್ಳಿಗಳ ಆರೋಗ್ಯದ ಜವಾಬ್ದಾರಿಹೊತ್ತ ಈ ಆಸ್ಪತ್ರೆ ಇದೀಗ ಗಿಡಗಂಟಿಗಳ ಮಧ್ಯಯೇ ಸೊರಗಿ ಹೋಗುತ್ತಿದೆ. ನೇಬಗೇರಿ ಗ್ರಾಮದಿಂದ ಅರ್ಧ ಕಿ.ಮಿ ದೂರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ನಿರ್ಮಿಸಲ್ಪಟ್ಟ ಈ ಕಟ್ಟಡ ಸುಮಾರು 12 ಲಕ್ಷ ಖರ್ಚು ಮಾಡಲಾಗಿದೆ.
ಆದರೆ ಇಲ್ಲಿವರೆಗೆ ಈ ಆಸ್ಪತ್ರೆಗೆ ವೈದ್ಯರು ಕೂಡ ಬಂದಿಲ್ಲ. ಜೊತೆಗೆ ಆಸ್ಪತ್ರೆಯಲ್ಲಿ ಯಾವ ಸಲಕರಣೆಗಳು ಇಲ್ಲ. ಆಸ್ಪತ್ರೆಯ ಸುತ್ತಮುತ್ತ ಬರಿ ಗಲೀಜು, ದುರ್ವಾಸನೆ. ಹೀಗೆ ಹತ್ತು ಹಲುವು ರೋಗಗಳನ್ನು ನಿವಾರಣೆ ಮಾಡುಬೇಕಾಗಿರುವ ಈ ಆಸ್ಪತ್ರೆ ಇದೀಗ ತಾನೆ ನಿರ್ವಹಣೆ ಇಲ್ಲದ ರೋಗಕ್ಕೆ ತುತ್ತಾಗಿ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿ ಕಾದು ಕುಳಿತಿದೆ.
ಇನ್ನು ಈ ಆಸ್ಪತ್ರೆ ನೇಬಗೇರಿ ಗ್ರಾಮದಿಂದ ಸುಮಾರು ಅರ್ಧ ಕಿ.ಮಿ ದೂರದಲ್ಲಿ ಕಟ್ಟಲಾಗಿದೆ. ಆಸ್ಪತ್ರೆಗೆ ಹೋಗಲು ಸರಿಯಾದ ದಾರಿ ಇಲ್ಲ. ದಾರಿ ಉದ್ದಕ್ಕೂ ಬರೀ ಗಿಡಗಂಟಿಗಳೆ ಬೆಳೆದಿವೆ. ಇನ್ನು ಈ ಆಸ್ಪತ್ರೆ ಹಳ್ಳದ ಪಕ್ಕದಲ್ಲಿಯೇ ಕಟ್ಟಲಾಗಿದ್ದು, ಮಳೆ ನೀರು ಬಂತು ಅಂದ್ರೆ ಇಡೀ ಆಸ್ಪತ್ರೆಯ ಸುತ್ತ ಮಳೆ ನೀರು ನಿಲುತ್ತದೆ. ಇನ್ನು ಈ ಆಸ್ಪತ್ರೆಗೆ ಸರ್ಕಾರ ಮೂವರು ಸಿಬ್ಬಂದಿಗರನ್ನು ನೇಮಿಸಿದೆ. ಓರ್ವ ಹಿರಿಯ ಆರೋಗ್ಯ ಸಹಾಯಕಿ ಹಾಗೂ ಓರ್ವ ಹಿರಿಯ ಆರೋಗ್ಯ ಸಹಾಯಕನಾಗಿ ನೇಮಕವಾಗಿದ್ದು, ಇಲ್ಲಿಯವರೆಗು ಅವರು ಆಸ್ಪತ್ರೆಯ ಮೆಟ್ಟಿಲು ಎರಿಲ್ಲ ಅಂತಾರೆ ಇಲ್ಲಿಯ ಗ್ರಾಮಸ್ಥರು.
ತಂಗಡಗಿ ಗ್ರಾಮದಲ್ಲಿ ಇದರ ಮುಖ್ಯ ಕಚೇರಿಯಾಗಿದ್ದು, ಸಿಬ್ಬಂದಿಗಳು ಬರೀ ನಾಮಕಾವಾಸ್ತೆ ಕಚೇರಿಗೆ ಭೇಟಿ ನೀಡಿ ಹಾಜರಾತಿ ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಗ್ರಾಮೀಣ ಭಾಗದ ಜನರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಫಲೀಸಬೇಕು ಎಂಬ ದೃಷ್ಟಿಯಿಂದ ಕಟ್ಟಿಸಲ್ಪಟ್ಟ ಈ ಆಸ್ಪತ್ರೆ ಇದೀಗ ಸರಿಯಾದ ನಿರ್ವಹಣೆ ಇಲ್ಲದೆ, ಪಾಳುಬಿದ್ದಿದೆ. ಆಸ್ಪತ್ರೆಯ ಎಲ್ಲಾ ಕಿಡಕಿಗಳು ಹೊಡೆದು ಹೋಗಿವೆ, ಬಾಗಿಲುಗಳು ಮುರಿದು ಹೋಗಿವೆ. ಹೀಗೆ ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರುವ ಈ ಕಿರಿಯ ಸಹಾಯಕ ಉಪಕೇಂದ್ರ ಇದೀಗ ತನಗೆ ನಿರ್ವಹಣೆ ಎಂಬ ಚಿಕಿತ್ಸೆಯ ನಿರೀಕ್ಷೆಯಲ್ಲಿ ಸೊರಗಿ ಹೋಗುತ್ತಿದೆ.
ಒಟ್ಟಿನಲ್ಲಿ ಸರ್ಕಾರ ಅದೆಷ್ಟೋ ಹಣ ಬಿಡುಗಡೆ ಮಾಡಿ ಗ್ರಾಮೀಣ ಭಾಗದ ಜನರಿಗೆ ಸರಿಯಾದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯಲ್ಲಿ ಎಂಬ ಉದ್ದೇಶದಿಂದ ಆಸ್ಪತ್ರೆಗಳನ್ನು ತೆರೆದರೆ. ಇತ್ತ ಅದನ್ನು ಸರಿಯಾಗಿ ನಿರ್ವಹಣೆ ಮಾಡದ ಅಧಿಕಾರಿಗಳು ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವಿನ ಬಾವಿಗೆ ದೂಡುತ್ತಿದ್ದಾರೆ. ಕೂಡಲೇ ಸರ್ಕಾರ ಇತ್ತ ಗಮನಹರಿಸಿ ನಿರ್ವಹಣೆ ಇಲ್ಲದೆ ಹಾಳುಬಿದ್ದಿರುವ ಈ ಆಸ್ಪತ್ರೆಗೆ ಮರು ಜೀವ ತುಂಬಬೇಕಾಗಿದೆ. ಅಷ್ಟೆ ಅಲ್ಲದೆ ಈ ಆಸ್ಪತ್ರೆಯ ದುಸ್ಥಿತಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.