ಮುದ್ದೇಬಿಹಾಳ (ವಿಜಯಪುರ): ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೇಳೆಯಲ್ಲಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ. ಅಂತಹ ಹೋರಾಟಗಾರರಲ್ಲಿ ಮುದ್ದೇಬಿಹಾಳದ ದಿ. ರೇವಣಸಿದ್ದಯ್ಯ ಲದ್ದಿಮಠ ಕೂಡ ಒಬ್ಬರು. 1932ರಲ್ಲಿ ಅಲಿಯಾಬಾದ್ನಲ್ಲಿ ಸೇಂದಿ ಗಿಡ ಕಡಿದು ಮುಂದೆ ಪಿಕೇಟಿಂಗ್ ಮಾಡಿದ ಪರಿಣಾಮ ಪೊಲೀಸರು ಇವರನ್ನು ಬಂಧಿಸಿ, ನಾಲ್ಕು ತಿಂಗಳು ಜೈಲು ಶಿಕ್ಷೆ 100 ರೂ. ದಂಡ ವಿಧಿಸಿದ್ದರು. ಇವರು ಮೊದಲು ವಿಜಯಪುರದಲ್ಲಿ ಜೈಲುವಾಸ ಅನುಭವಿಸಿದ್ದರು.
100 ರೂ. ದಂಡ ಕೊಡಲು ಆಗದಿದ್ದಾಗ ಹೆಚ್ಚುವರಿ ಶಿಕ್ಷೆಯಾಗಿ ಇಸಾಪೂರ ಜೈಲಿಗೆ ಇವರನ್ನು ಕಳುಹಿಸಲಾಯಿತು. ಇವರಿಗೆ ಅಲ್ಲಿ ಮಹಾತ್ಮ ಗಾಂಧೀಜಿಯವರಿಂದ ಭಂಗಿ ಬಳಿಯುವ ಕಾರ್ಯ ಸಿಕ್ಕಿತು. ದಿನಾಲು 3 ಬ್ಲಾಕಿನ ಡಬ್ಬಿ ಖಾಲಿ ಮಾಡಿ ಅವುಗಳನ್ನು ಕಸಬರಿಗೆಯಿಂದ ಸ್ವಚ್ಛಗೊಳಿಸಿ ತೊಳೆದು ಇಡುತ್ತಿದ್ದರು. ವಿಜಯಪುರ ಜೈಲಿನಲ್ಲಿದ್ದಾಗ ಚನ್ನಬಸಪ್ಪ ಅಂಬಲಿ, ಕಲ್ಲಯ್ಯ ಡೋಣೂರ, ಬಸಯ್ಯ ಪುರಾಣಿಕಮಠ ಹಾಗೂ ರೇವಣಸಿದ್ದಯ್ಯನವರು ಆರು ಮಣ ಜೋಳವನ್ನು ನಿಂತು ಬೀಸುತ್ತಿದ್ದರು.
ಬ್ರಿಟಿಷ್ ಸರ್ಕಾರದ ವಿರುದ್ಧ ಠರಾವು ಮಾಡಿದ ಬುಲೆಟಿನ್ ಪ್ರತಿಗಳನ್ನು ಮತ್ತು ಜೈಲು ಶಿಕ್ಷೆಯ ಠರಾವಿನ ಪ್ರತಿಗಳನ್ನು ಸಿನಿಮಾ ನೋಡಿ ಹೊರ ಬರುವ ಜನರಿಗೆ ಹಂಚಿ ಲಾಠಿ ಏಟು ತಿಂದಿದ್ದರು. ಜೂ. 29,1932 ರಂದು ಬ್ರಿಟಿಷರು ಇವರನ್ನು ಬಂಧನದಲ್ಲಿರಿಸಿದ್ದರು. ಬಳಿಕ ಎರಡು ತಿಂಗಳ ಬಳಿಕ ಸಾಕ್ಷಿ ಇಲ್ಲವೆಂದು ಬಿಡುಗಡೆ ಮಾಡಲಾಯಿತು. ಇಂತಹ ಧೀಮಂತ ಹೋರಾಟಗಾರರು ಜೂ. 5, 2007ರಲ್ಲಿ ನಿಧನರಾದರು.
ಇದನ್ನೂ ಓದಿ: ಸ್ವಾತಂತ್ರ್ಯ ಅಮೃತ ಮಹೋತ್ಸವ.. ಬೆಳಗಾವಿಯ ಹೋರಾಟದ ಕ್ಷಣಗಳು
ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕುಟುಂಬ: ಸ್ವಾತಂತ್ರ್ಯಕ್ಕಾಗಿ ಹೋರಾಡಿರುವ ರೇವಣಸಿದ್ದಯ್ಯನವರ ಕುಟುಂಬ ಸಂಕಷ್ಟದಲ್ಲಿದೆ. ಅವರ ಮಗ ಅರವಿಂದ ಲದ್ದಿಮಠ ತಮ್ಮ ಸಂಕಷ್ಟದ ಜೀವನ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿ, ಇಂದಿಗೂ ನಾವು ಇದೇ ಮನೆಯಲ್ಲಿಯೇ ಜೀವನ ನಡೆಸುತ್ತಿದ್ದೇವೆ. ಸರ್ಕಾರದಿಂದ ಯಾವುದೇ ಸೌಲಭ್ಯಗಳು ನಮಗೆ ದೊರಕಿಲ್ಲ. ಮಳೆ ಬಂದರೆ ಮನೆಯಲ್ಲಿ ಕೂರಲು ಜಾಗ ಸಹ ಇಲ್ಲ. ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ನಮ್ಮ ಕುಟುಂಬವನ್ನು ಸರ್ಕಾರ ಗಮನಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.