ಮುದ್ದೇಬಿಹಾಳ : ಭಾರತೀಯ ಸೇನೆ, ಅರೆಸೇನೆಯಲ್ಲಿ ಸೇವೆ ಸಲ್ಲಿಸಿರುವ, ಸಲ್ಲಿಸುತ್ತಿರುವ ಕನ್ನಡದ ಸೈನಿಕರಿಗೆ ಹಾಗೂ ವಿಕಲಚೇತನರಿಗೆ ಯಾವುದೇ ಶುಲ್ಕವಿಲ್ಲದೇ ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ನೀಡಲಾಗುವುದು ಎಂದು ನಾಡೋಜ ಕ.ಸಾ.ಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ಮಹೇಶ್ ಜೋಷಿ ಭರವಸೆ ನೀಡಿದ್ದಾರೆ.
ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮತಯಾಚನೆ ಬಳಿಕ ಮಾತನಾಡಿದ ಅವರು, ಅಧ್ಯಕ್ಷನಾಗಿ ಆಯ್ಕೆಯಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತನ್ನಾಗಿ ಮಾರ್ಪಡಿಸಲು ಅಜೀವ್ ಸದಸ್ಯರ ಶುಲ್ಕವನ್ನು ಈಗಿರುವ 500 ರೂ.ಗಳಿಂದ 250ಕ್ಕೆ ಇಳಿಸುತ್ತೇನೆ. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 100 ರೂ. ಸದಸ್ಯತ್ವ ಶುಲ್ಕವನ್ನು ನಿಗದಿ ಮಾಡಿ ಕನ್ನಡದ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಲು ಜಾಗೃತಿ ಅಭಿಯಾನ ಮಾಡುವುದಾಗಿ ತಿಳಿಸಿದರು.
ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಮಾತನಾಡಿ, ಜಾತ್ಯಾತೀತ ವ್ಯಕ್ತಿಯಾಗಿರುವ ಡಾ.ಮಹೇಶ ಜೋಷಿಯನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಕ.ಸಾ.ಪ.ದ ಚಟುವಟಿಕೆಗಳ ವಿಸ್ತರಣೆಗೆ ಮಾಧ್ಯಮ ರಂಗದಲ್ಲಿ ಕೆಲಸ ಮಾಡಿರುವ ಶಿಶುನಾಳ ಷರೀಫರ ಗುರು ಗೋವಿಂದಭಟ್ಟರ ವಂಶಜರಾಗಿರುವ ಜೋಷಿ ಆಯ್ಕೆ ಪ್ರಸ್ತುತವಾಗಿದೆ ಎಂದರು.