ವಿಜಯಪುರ: ಇಂದು ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೂ ಮತ್ತು ಐತಿಹಾಸಿಕ ನಗರ ವಿಜಯಪುರಕ್ಕೂ ವಿಶೇಷ ನಂಟಿದೆ. 2013ರ ಸೆ.24ರಂದು ಸೈನಿಕ ಶಾಲೆಯಲ್ಲಿ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಭಾಗವಹಿಸಿದ್ದರು.
ಪ್ರಣಬ್ ಮುಖರ್ಜಿ ಅವರು ವಿಜಯಪುರ ಸೈನಿಕ ಶಾಲೆಗೆ ಭೇಟಿ ನೀಡಿದ್ದ ಮೊದಲ ರಾಷ್ಟ್ರಪತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ ಬಿ ಪಾಟೀಲ್, ಎಸ್ ಆರ್ ಪಾಟೀಲ್, ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಮುಖರ್ಜಿ ಅವರು ಅಂದಿನ ಸೈನಿಕ ಶಾಲೆ ಪ್ರಾಚಾರ್ಯ ಕರ್ನಲ್ ಸನ್ನಿ ಅವರಿಂದ ತಮ್ಮ ಭಾವಚಿತ್ರವನ್ನು ಗೌರವವಾಗಿ ಪಡೆದಿದ್ದರು. ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಪ್ರಣಬ್ ಮುಖರ್ಜಿ ಅವರು ಸನ್ಮಾನಿಸಿದ್ದರು. ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (84) ಇಹಲೋಕ ತ್ಯಜಿಸಿದರು.