ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮೊದಲು ವಿಜಯಪುರ ನಗರದ ಅಭಿವೃದ್ಧಿಯತ್ತ ಗಮನಹರಿಸಲಿ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಸಲಹೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ರಸ್ತೆ, ಚರಂಡಿ ನೀರಿನ ಸಮಸ್ಯೆ ನಗರದಲ್ಲಿ ಎದುರಾಗಿದೆ. ಅದರ ಕುರಿತು ಲಕ್ಷ್ಯ ವಹಿಸುವುದನ್ನು ಬಿಟ್ಟಿದ್ದಾರೆ. ಸಂತ್ರಸ್ತರಿಗೆ ತೊಂದರೆಯಾದಾಗ ಅವರ ನೆರವಿಗೆ ಹೋಗಲಿಲ್ಲ. ಯತ್ನಾಳ ಅಧ್ಯಕ್ಷತೆಯಲ್ಲಿ ಸಿದ್ದಸಿರಿ ಬ್ಯಾಂಕ್, ಶಿಕ್ಷಣ ಸಂಸ್ಥೆಗಳಿಂದ ಸಂತ್ರಸ್ತರಿಗೆ ಏನನ್ನು ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವರಾಗಿದ್ದಾಗ ಒಬ್ಬ ಕಾರ್ಯಕರ್ತನನ್ನು ಹೊಡೆದಿದ್ದರು. ಆಗಲೂ ಇವರ ಮೇಲೆ ದೂರು ಸಲ್ಲಿಕೆಯಾಗಿತ್ತು. 2009 ರಲ್ಲಿ ‘ಯಡಿಯೂರಪ್ಪ ಹಟಾವೋ ಬಿಜೆಪಿ ಬಚಾವೋ’ ಎಂಬ ಆಂದೋಲನ ಮಾಡಿದರು. ಜೆಡಿಎಸ್‌ನಲ್ಲಿ ಇದ್ದಾಗಂತೂ ಯಡಿಯೂರಪ್ಪ ನವರ ಕುರಿತು ಹೇಗೆಲ್ಲಾ ಮಾತನಾಡಿದ್ದಾರೆ. ಯತ್ನಾಳ ಸುಳ್ಳನ್ನೇ ಒಂದು ದಾರಿ ಮಾಡಿಕೊಂಡು ಲೀಡರ್ ಆಗಲು ಹೊರಟಿದ್ದಾರೆ. ತೊಗಾಡಿಯಾ, ಮುತಾಲಿಕ್ ಹಾಗೂ ನನಗೂ ಬೈದಿದ್ದಾರೆ. ಈಗ ಹಿಂದೂ ಅನ್ನೋ ಬ್ರ್ಯಾಂಡ್ ಆಗಲು ಹೊರಟಿದ್ದಾರೆ. ಯತ್ನಾಳ ಸಾಂದರ್ಭಿಕವಾಗಿ ಮನಸ್ಸಿಗೆ ಬಂದಂಗೆ ಹೇಳಿಕೆ ನೀಡುತ್ತಾರೆ ಎಂದು ಕಿಡಿಕಾರಿದರು. ಮುಂಬರುವ ದಿನಗಳಲ್ಲಿ ಇದರ ಕುರಿತು ಸಂಪೂರ್ಣ ದಾಖಲೆ ಬಿಚ್ಚಿಡುವೆ ಎಂದು ಇದೇ ವೇಳೆ ಬಾಂಬ್ ಸಿಡಿಸಿದರು.
ನನಗೇನು ಅಧಿಕಾರ ಇದ್ದರೆ ಮಾತ್ರ ಕೆಲಸ ಮಾಡುವವನಲ್ಲ. ನನಗೆ ಮುಂಬರುವ ದಿನಗಳಲ್ಲಿ ಪಕ್ಷದಿಂದ ಮತ್ತೆ ಅವಕಾಶ ಸಿಗಬಹುದು. ಸಿಗದಿದ್ದರೂ ಕೆಲಸ ಮಾಡುವೆ. ಬಸನಗೌಡ ಪಾಟೀಲ್ ಯತ್ನಾಳ ಅವರು ತಮ್ಮದೇ ಆದ ಒಂದು ಗ್ಯಾಂಗ್ ಕಟ್ಟಿಕೊಂಡು ಹೊರಟಿದ್ದಾರೆ. ಬಿಜೆಪಿ ಪಕ್ಷದ ಕಾರ್ಯಕ್ರಮಕ್ಕೆ ಅವರು ಬರದೇ ಇರುವುದು ರಾಜ್ಯದ ನಾಯಕರು ಗಮನಿಸುತ್ತಿದ್ದಾರೆ. ಯಡಿಯೂರಪ್ಪನವರನ್ನು ಖುಷಿ ಪಡಿಸಲು ಯತ್ನಾಳ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪ ನಂತರ ನಾನೇ ಎಂಬ ಭಾವನೆಯಲ್ಲಿ ಯತ್ನಾಳ ಇದ್ದಾರೆ. ಅದಕ್ಕಾಗಿ ಜಾಕೆಟ್ ಹಾಕಿಕೊಂಡು ನಾನೇ ಎರಡನೇ ನಂಬರ್ ಎಂದುಕೊಂಡು ಓಡಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶೋಭಾ ಮೇಡಂ ಹಾಗೂ ಯಡಿಯೂರಪ್ಪನವರಿಗೆ ಬಾಯಿಗೆ ಬಂದಂಗೆ ಬೈಯೋದು, ನಂತರ ಹೋಗಿ ಕೈ ಕಾಲು ಹಿಡಿಯೋದು ಯತ್ನಾಳ ಚಾಳಿ. ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.