ವಿಜಯಪುರ: ಕೊರೊನಾ ಕಾಯಿಲೆ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಗೋವಾ ಕನ್ನಡಿಗರಿಗೆ ನೆರವಾಗಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ ಇಂದು ತಮ್ಮ ಎಂ.ಬಿ.ಪಾಟೀಲ ಫೌಂಡೇಶನ್ ಮೂಲಕ ಗೋವಾದ ಕನ್ನಡಿಗರಿಗೆ ದಿನ ನಿತ್ಯ ಬಳಕೆಯ ಆಹಾರ-ಧಾನ್ಯಗಳ ಕಿಟ್‍ಗಳನ್ನು ತಯಾರಿಸಿ ನೀಡಿದ್ದಾರೆ. ವಿಜಯಪುರದಲ್ಲಿ ಫೌಂಡೇಶನ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ನೇತೃತ್ವದಲ್ಲಿ ಹಲವಾರು ಕಾರ್ಯಕರ್ತರು ಪಡಿತರ ಧಾನ್ಯಗಳನ್ನು ಎರಡು ಲಾರಿಯಲ್ಲಿ ತುಂಬಿ ವಿಜಯಪುರದಿಂದ ಗೋವಾಕ್ಕೆ ಕಳುಹಿಸಿಕೊಟ್ಟರು.
ಎರಡು ಲಾರಿಗಳಿಗೆ ಜಿಲ್ಲಾಡಳಿತದಿಂದ ಅನುಮತಿ ಪಡೆಯಲಾಗಿದ್ದು, ಗೋವಾದಲ್ಲಿ ಸಚಿವ ಮೈಕಲ್ ಲೋಬೊ ಅವರ ವಿಶೇಷ ಅಧಿಕಾರಿ, ಕನ್ನಡಿಗ ದಿನೇಶ ಹಾಗೂ ವಿಜಯಪುರದ ಸುರೇಶ ಹಂಚನಾಳ ಇವರು ಸ್ಥಳೀಯ ಕನ್ನಡಿಗರಿಗೆ ಆ ಕಿಟ್‍ಗಳನ್ನು ತಲುಪಿಸುವ ಕಾರ್ಯ ಮಾಡಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಪ್ರತಿ ಕಿಟ್‍ನಲ್ಲಿ 5 ಕೆ.ಜಿ ಗೋಧಿ ಹಿಟ್ಟು, 3 ಕೆ.ಜಿ ಅಕ್ಕಿ, 1ಕೆ.ಜಿ ಬೇಳೆ, 1 ಲೀಟರ್ ಎಣ್ಣೆ, ಮಸಾಲೆ ಉಪ್ಪು, ಖಾರ ಸೇರಿದಂತೆ ದಿನನಿತ್ಯದ ಅಗತ್ಯ ಸಾಮಗ್ರಿಗಳು ಒಳಗೊಂಡಿವೆ ಎಂದರು.
ಎಂ.ಬಿ.ಪಾಟೀಲ ಸೂಚನೆಯಂತೆ ನಾವು ಇಲ್ಲಿಂದ ಪಡಿತರ ಕಳುಹಿಸುವುದು ಕಷ್ಟ, ಹಾಗಾಗಿ ಅಲ್ಲಿಗೆ ಹಣ ಕಳುಹಿಸುತ್ತೇವೆ. ನೀವೇ ಪಡಿತರ ಖರೀದಿಸಿ, ಅಲ್ಲಿನ ಜನರಿಗೆ ನೀಡಿ ಎಂದು ಕೇಳಿದ್ದೇವು. ಆದರೆ ಗೋವಾದಲ್ಲಿ ಹೊರರಾಜ್ಯದ ಸಂಪರ್ಕ ಕಡಿತಗೊಂಡ ಕಾರಣ ಆಹಾರ-ಧಾನ್ಯಗಳು ಲಭ್ಯವಿಲ್ಲ. ಡಿ-ಮಾರ್ಟ್, ರಿಲಾಯನ್ಸ್ ಮಾರ್ಟ್‍ನಂತಹ ದೊಡ್ಡ ಸಂಸ್ಥೆಗಳಿಗೆ ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ವಿಜಯಪುರದ ಗಣ್ಯ ಕಿರಾಣಾ ವ್ಯಾಪಾರಸ್ಥರಾದ ಸದಾಶಿವ ಹಾಗೂ ಅಶೋಕ ಗೊಡ್ಡೋಡಗಿ ಸಹೋದರರು ಲಾಕ್‍ಡೌನ್ ಸಂದರ್ಭದಲ್ಲಿಯೂ ಆಹಾರ-ಧಾನ್ಯಗಳನ್ನು ಹೊಂದಿಸಿ ನೀಡಿದ್ದಾರೆ ಎಂದು ಎಂ.ಬಿ.ಪಾಟೀಲ ಫೌಂಡೇಶನ್ ನಿರ್ದೇಶಕ ಡಾ.ಮಹಾಂತೇಶ ಬಿರಾದಾರ ತಿಳಿಸಿದರು.
ಫೌಂಡೇಶನ್ ನಿರ್ದೇಶಕ ಡಾ.ಗಂಗಾಧರ ಸಂಬಣ್ಣಿ, ನಾಗರಾಜ ಅಳ್ಳೊಳ್ಳಿ ನೇತೃತ್ವದಲ್ಲಿ ಲಕ್ಷ್ಮಣ ಇಲಕಲ್, ಸಂತೋಷ ಬಾಲಗಾಂವಿ, ವಿಜಯ ಕಾಳೆ, ನಿಂಗಪ್ಪ ಸಂಗಾಪುರ, ಜಗದೀಶ ರೆಬಿನಾಳ, ಶಿವಾನಂದ ಜಕ್ಕನ್ನವರ, ಪುಂಡಲಿಕ್ ರಾಠೋಡ, ಸಂತೋಷ ಬಾಗಾಡಿಯಾ ಮತ್ತಿತರರು ಕಾರ್ಯನಿರ್ವಹಿಸಿ ಕಿಟ್‍ಗಳನ್ನು ತಯಾರಿಸಿದ್ದಾರೆ. ಬಿ.ಎಲ್.ಡಿ.ಇ ನಿರ್ದೇಶಕ ಸಂಗು ಸಜ್ಜನ, ವಿಡಿಎ ಮಾಜಿ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ಶರಣಪ್ಪ ಯಕ್ಕುಂಡಿ, ದಿನೇಶ ಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.