ಮುದ್ದೇಬಿಹಾಳ : ಪಟ್ಟಣದ ಹುಡ್ಕೋದಲ್ಲಿರುವ ಮಿನಿವಿಧಾನಸೌಧ ಸಮೀಪದ ಬಾಂಡ್ ರೈಟರ್ಸ್ಗಳಿಗೆ ಸೇರಿದ ನಾಲ್ಕು ಅಂಗಡಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂಗಡಿಗಳಲ್ಲಿರುವ ವಸ್ತುಗಳೆಲ್ಲ ಸುಟ್ಟು ಕರಕಲಾದ ಘಟನೆ ಶುಕ್ರವಾರ ನಡೆದಿದೆ. ಪಿ.ಎಂ.ಕನ್ನೂರ, ಆರ್.ಎಸ್.ಸಂಕೀರ್ಣ, ಪಿ.ಎಸ್.ಹಿರೇಮಠ, ಶಿವಾನಂದ ಪೊಲೇಶಿ ಅವರ ಅಂಗಡಿಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಎಲ್ಲ ಸಾಮಗ್ರಿ ಸುಟ್ಟಿವೆ.
ಯುಗಾದಿ ಅಮವಾಸ್ಯೆಯ ಪ್ರಯುಕ್ತ ಅಂಗಡಿಕಾರರೊಬ್ಬರು ಪೂಜೆ ಸಲ್ಲಿಸಿ ದೀಪ, ಅಗರಬತ್ತಿ ಹಚ್ಚಿಟ್ಟು ಹೊರ ಹೋಗಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಏಕಾಏಕಿ ಅಂಗಡಿಗಳಿಂದ ದಟ್ಟವಾದ ಹೊಗೆ ಬರಲಾರಂಭಿಸಿದೆ. ಈ ಸಮಯದಲ್ಲಿ ಹುಡ್ಕೋ ಬಡಾವಣೆಗೆ ವಿದ್ಯುತ್ ಸಂಪರ್ಕ ಇರಲಿಲ್ಲ ಎನ್ನಲಾಗಿದ್ದು, ದೀಪದ ಅಥವಾ ಊದಿನಕಡ್ಡಿಯ ಕಿಡಿ ಬಿದ್ದು ಬೆಂಕಿ ತಗುಲಿರಬಹುದು ಎಂದು ಹೇಳಲಾಗಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸಿದರಲ್ಲದೇ ಮುಂದಾಗಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದರು. ಇಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಂಗಡಿಗಳಿದ್ದು, ಅಲ್ಲದೇ ಪಕ್ಕದಲ್ಲೇ ಕರ್ಣಾಟಕ ಬ್ಯಾಂಕ್ ಕಟ್ಟಡವೂ ಇದೆ. ಈ ಘಟನೆ ರಾತ್ರಿ ಹೊತ್ತಲ್ಲಿ ಸಂಭವಿಸಿದ್ದರೆ, ಹಾನಿಯ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.