ವಿಜಯಪುರ: ಪಿಎಸ್ಐ ನೇಮಕಾತಿ ಹಗರಣ ಇನ್ನೂ ತನಿಖಾ ಹಂತದಲ್ಲಿ ಇರುವಾಗಲೇ, ಕೆಪಿಎಸ್ಸಿ ಕರೆದಿದ್ದ ಎಫ್ಡಿಎ ಪ್ರಥಮ ದರ್ಜೆ ಸಹಾಯಕ ಹುದ್ದೆ ಕೊಡಿಸುವುದಾಗಿ ಮಹಿಳಾ ಪಿಎಸ್ಐ ಒಬ್ಬರು ಅವರ ಸಂಬಂಧಿಕ ಯುವಕನಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ಸದ್ಯ ಮೈಸೂರಿನ ಎನ್. ಆರ್. ಪೊಲೀಸ್ ಠಾಣೆಯ ಸಂಚಾರಿ ವಿಭಾಗದ ಪಿಎಸ್ಐ, ಎಫ್ಡಿಎ ಹುದ್ದೆ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂದು ಯುವಕ ಸಂಗಮೇಶ ಝಳಕಿ ಎಂಬುವವರು ಆರೋಪಿಸಿದ್ದಾರೆ. ಈ ಯುವಕ ಪಿಎಸ್ಐ ಸಂಬಂಧಿಕ ಎನ್ನಲಾಗುತ್ತಿದೆ.
ಅಷ್ಟಕ್ಕೂ ಏನಿದರ ಹಿನ್ನೆಲೆ: 2020 ಮಾರ್ಚ್ನಲ್ಲಿ ಎಫ್ಡಿಎ ಹುದ್ದೆಗಾಗಿ ಕೆಪಿಎಸ್ಸಿ ಅರ್ಜಿ ಆಹ್ವಾನಿಸಲಾಗಿತ್ತು. ಇದೇ ಪಿಎಸ್ಐ ತಮ್ಮ ಸಂಬಂಧಿಕ ಸಂಗಮೇಶ ಅವರಿಗೆ ಅರ್ಜಿ ಹಾಕಲು ಹೇಳಿದ್ದರು. ತಮಗೆ ಪರಿಚಯಸ್ಥರಿಂದ ಹುದ್ದೆ ಕೊಡಿಸುವೆ ಮೊದಲು 2 ಲಕ್ಷ ರೂ. ಹೊಂದಾಣಿಕೆ ಮಾಡಲು ಹೇಳಿದ್ದರು.
ನಂತರ ಹುದ್ದೆ ದೊರೆತ ಮೇಲೆ 15 ಲಕ್ಷದವರೆಗೆ ಹಣ ನೀಡಬೇಕು ಎಂದರು. ನಿರುದ್ಯೋಗಿಯಾಗಿದ್ದ ಸಂಗಮೇಶ ನೌಕರಿ ಸಿಗುವ ಆಸೆಯಿಂದ ಮೊದಲು 1.80ಲಕ್ಷ ರೂ.ಗಳನ್ನು ಪಿಎಸ್ಐ ಖಾತೆಗೆ ಜಮಾ ಮಾಡಿದ್ದಂತೆ. ನಂತರ ಹಣದ ಅವಶ್ಯಕತೆ ಇದೆ ಎಂದು ಹೇಳಿ ಮತ್ತೆ 30 ಸಾವಿರ ತೆಗೆದುಕೊಂಡಿದ್ದರು ಎಂದು ಸಂಗಮೇಶ್ ದೂರಿದ್ದಾನೆ.
ಪರೀಕ್ಷೆ ಮಾಹಿತಿ ನೀಡಿದ್ದ ಪಿಎಸ್ಐ: ಎಫ್ಡಿಎ ಪರೀಕ್ಷೆಗೆ ಹಾಜರಾದಾಗ ಮಾಡಬೇಕಾದ ಕೆಲಸವನ್ನು ವಿವರಿಸಿದ್ದರು. ನಿನಗೆ ಬರುವ ಉತ್ತರ ಮಾತ್ರ ಬರೆದು ಉಳಿದ ಪ್ರಶ್ನೆಗಳನ್ನು ಖಾಲಿ ಬಿಡು ನಂತರ ಒಎಂಆರ್ ಶೀಟ್ ಭರ್ತಿ ಮಾಡಿ ಪರೀಕ್ಷೆ ಪಾಸ್ ಮಾಡಿ ಉದ್ಯೋಗ ಕೊಡಿಸುವುದಾಗಿ ಸಂಗಮೇಶಗೆ ತಿಳಿಸಿದ್ದಳು. ಅದರಂತೆ ಸಂಗಮೇಶ ನಡೆದುಕೊಂಡಿದ್ದನು.
ಪರೀಕ್ಷೆ ಫಲಿತಾಂಶ ಬಂದಾಗ ಅಲ್ಲಿ ಯುವಕನ ಹೆಸರು ಇರಲಿಲ್ಲ. ಈ ಬಗ್ಗೆ ಪಿಎಸ್ಐ ಅವರಿಗೆ ಸಂಗಮೇಶ ಪೋನ್ ಮಾಡಿ ವಿಚಾರಿಸಿದ್ದಾರೆ. ಆಗ ನೀನು ಯಾರು ಎಂದು ಪ್ರಶ್ನಿಸಿ ಪೋನ್ ಕಟ್ ಮಾಡಿದ್ದರಂತೆ. ನಂತರ ಅವರ ತಂದೆಯನ್ನು ವಿಚಾರಿಸಿದರೆ ನೀವು ನಮಗೆ ಸಾಲ ಕೊಡಬೇಕಾಗಿತ್ತು, ಅದನ್ನು ಪಡೆದುಕೊಂಡಿದ್ದೇವೆ ಎಂದು ಜಾರಿ ಕೊಂಡಿದ್ದಾರೆ ಎಂದು ಯುವಕ ಹೇಳುತ್ತಿದ್ದಾನೆ.
ಈಗ ಉದ್ಯೋಗ ಇಲ್ಲ, ಅತ್ತ ನೀಡಿದ ಹಣ ವಾಪಸ್ ಆಗದೇ ಹುದ್ದೆಯ ನಿರೀಕ್ಷೆಯಲ್ಲಿದ್ದ ಸಂಗಮೇಶನಿಗೆ ದಿಕ್ಕು ತೋಚದಂತಾಗಿದೆ. ಸದ್ಯ ಮಾಧ್ಯಮದ ಎದುರು ಬಂದಿರುವ ಸಂಗಮೇಶ ತಮಗೆ ಜೀವ ಬೆದರಿಕೆಯಿದೆ ರಕ್ಷಣೆ ನೀಡಬೇಕು. ಹಾಗೂ ತಾನು ನೀಡಿದ ಹಣ ಮರಳಿಸಬೇಕು ಎಂದು ಮನವಿ ಮಾಡಿದ್ದಾನೆ.
ಇದನ್ನೂ ಓದಿ: ಸಬ್ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ: ತಲೆಮರೆಸಿಕೊಂಡಿರುವ ಪಿಎಸ್ಐ ನವೀನ್ಗಾಗಿ ಸಿಐಡಿ ಹುಡುಕಾಟ