ವಿಜಯಪುರ: ಸಾಲ ತೀರಿಸಲು ಹೊಲ ಮಾರಲು ಒಪ್ಪದ ಪತ್ನಿ ಮೇಲಿನ ಕೋಪಕ್ಕೆ ಪತಿಯೊಬ್ಬ ತನ್ನ ಇಬ್ಬರು ಮಕ್ಕಳಿಗೆ ಎಗ್ರೈಸ್ನಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಗೋನಾಳ ಎಸ್.ಹೆಚ್.ಗ್ರಾಮದಲ್ಲಿ ಗುರುವಾರ ನಡೆದಿದೆ. ಘಟನೆಯಲ್ಲಿ ಎರಡೂವರೆ ವರ್ಷದ ಮಗು ಸಾವನ್ನಪ್ಪಿದ್ದು, ಬಾಲಕಿ ಅಸ್ವಸ್ಥಳಾಗಿದ್ದಾಳೆ.
ಚಂದ್ರಶೇಖರ ಅಗಸನಾಳ ಎಂಬಾತನೆ ತನ್ನ ಮಕ್ಕಳಾದ ಶಿವರಾಜ್ ಹಾಗೂ ಐದು ವರ್ಷದ ಮಗಳು ರೇಣುಕಾಗೆ ಎಗ್ರೈಸ್ನಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸಿದ ಆರೋಪಿಯಾಗಿದ್ದಾನೆ. ಎರಡೂವರೆ ವರ್ಷದ ಮಗ ಶಿವರಾಜ್ ಸಾವನ್ನಪ್ಪಿದ್ದು, ಮಗಳು ವಿಜಯಪುರ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಸಂಬಂಧ ಆರೋಪಿ ವಿರುದ್ಧ ಆತನ ಪತ್ನಿ ಸಾವಿತ್ರಿ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಘಟನೆಯ ವಿವರ: ಚಂದ್ರಶೇಖರ ಜೀವನ ನಿರ್ವಹಣೆ ವಿಪರೀತ ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲು ಅವರ ಸ್ವಂತ ಊರು ನಿಡಗುಂದಿ ತಾಲೂಕಿನ ಇಟಗಿ ಗ್ರಾಮದಲ್ಲಿದ್ದ ಹೊಲ ಮಾರಲು ಮುಂದಾಗಿದ್ದ. ಇದಕ್ಕೆ ಪತ್ನಿ ಸಾವಿತ್ರಿ ವಿರೋಧ ವ್ಯಕ್ತಪಡಿಸಿದ್ದಳು. ದುಡಿದು ಸಾಲ ತೀರಿಸೋಣ ಎಂದು ಬುದ್ದಿವಾದ ಹೇಳಿದ್ದಳು. ಆದರೆ ಚಂದ್ರಶೇಖರ ಇದಕ್ಕೆ ಒಪ್ಪಿರಲಿಲ್ಲ ಎನ್ನಲಾಗಿದೆ.
ಇಷ್ಟಕ್ಕೂ ಒಪ್ಪದಿದ್ದಾಗ ಚಂದ್ರಶೇಖರ ತನ್ನ ಸಹೋದರರನ್ನು ಕರೆದುಕೊಂಡು ಬಂದು ರಾಜಿ ಸಂಧಾನ ಮಾಡಿಸಲು ಯತ್ನಿಸಿದ್ದಾನೆ. ಇದಕ್ಲೆ ಸಾವಿತ್ರಿ ಒಪ್ಪದಿದ್ದಾಗ ಎಲ್ಲರನ್ನೂ ಕೊಲೆ ಮಾಡಲು ಯೋಚಿಸಿ ಎಗ್ರೈಸ್ ತಂದು ಮಕ್ಕಳಿಗೆ ತಿನ್ನಿಸಿದ್ದಾನೆ. ಇದರಿಂದ ತೀವ್ರ ಅಸ್ವಸ್ಥರಾದ ಮಕ್ಕಳನ್ನು ಸಾವಿತ್ರಿ ಆಸ್ಪತ್ರೆಗೆ ಸಾಗಿಸಿದ್ದಾಳೆ.
ಆದರೆ ಮಗ ಶಿವರಾಜ್ ಸಾವನ್ನಪ್ಪಿದ್ದು, ಮಗಳು ರೇಣುಕಾ ತೀವ್ರ ಅಸ್ವಸ್ಥಳಾದ ಕಾರಣ ಮುದ್ದೇಬಿಹಾಳ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ತನ್ನ ಪತಿ ಚಂದ್ರಶೇಖರ ಕಾರಣ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸಾವಿತ್ರಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾ 'ಪ್ರೇಮ' ಕೊಲೆಯಲ್ಲಿ ಅಂತ್ಯ: ನೀಟ್ ತಯಾರಿಯಲ್ಲಿದ್ದ ಗೆಳತಿಯ ಕೊಂದ ಗೆಳೆಯ!