ಮುದ್ದೇಬಿಹಾಳ: ಅಪ್ಪನ ಹಾದಿಯಲ್ಲೇ ಮಗನನ್ನೂ ಕೋವಿಡ್ ಮಹಾಮಾರಿ ಬಲಿ ತೆಗೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ನಾಗರಬೆಟ್ಟ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ವಕೀಲರ ಸಂಘದ ಮಾಜಿ ಅಧ್ಯಕ್ಷ ದಿ. ಎಸ್.ಎಸ್. ಪಾಟೀಲ ಅವರ ಕಿರಿಯ ಪುತ್ರ ಮಹೇಶ ಪಾಟೀಲ(26) ಕೋವಿಡ್‌ಗೆ ಬಲಿಯಾದವರು. ಕೆಲ ತಿಂಗಳ ಹಿಂದೆ ಇವರ ಮದುವೆ ನಿಶ್ಚಯವಾಗಿತ್ತು. ಇದಕ್ಕಾಗಿ ಮನೆಯಲ್ಲಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿತ್ತು. ಮದುವೆ ಬಟ್ಟೆ ಸಂತೆಗಾಗಿ ತಮಿಳುನಾಡಿನ ಕಾಂಚಿವರಂಗೆ ಹೋಗಿ ಬಂದ ಮೇಲೆ ಮಹೇಶನಿಗೆ ಕೋವಿಡ್ ಸೋಂಕು ತಗುಲಿತ್ತು ಎನ್ನಲಾಗ್ತಿದೆ. ಹೀಗಾಗಿ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಪುತ್ರನ ಆರೈಕೆಯಲ್ಲಿ ನಿರತರಾಗಿದ್ದ ಅವರ ತಂದೆ ಎಸ್.ಎಸ್. ಪಾಟೀಲರಿಗೂ ಸೋಂಕು ತಗುಲಿ ಚಿಕಿತ್ಸೆ ಫಲಿಸದೆ ಮೇ 14ರಂದು ನಿಧನರಾಗಿದ್ದರು. ಆಗ ಆಸ್ಪತ್ರೆಯಲ್ಲೇ ಇದ್ದ ಮಹೇಶಗೆ ಆಕ್ಸಿಜನ್, ವೆಂಟಿಲೇಟರ್ ಮೇಲೆ ಚಿಕಿತ್ಸೆ ಮುಂದುವರೆದಿತ್ತು. ತಂದೆ ನಿಧನರಾದ 19ನೇ ದಿನಕ್ಕೆ ಮಗ ಮಹೇಶನೂ ತಂದೆಯ ಹಾದಿ ಹಿಡಿದದ್ದು, ವಕೀಲರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಈ ಘಟನೆಯಿಂದ ನಾಗರಬೆಟ್ಟ ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಹೆಚ್ಚಿದೆ. ಮಹೇಶ ಅವರ ಅಂತ್ಯಕ್ರಿಯೆ ನಾಗರಬೆಟ್ಟ ಗ್ರಾಮದಲ್ಲೇ ಕೋವಿಡ್ ನಿಯಮಗಳ ಅನ್ವಯ ನೆರವೇರಿಸಲಾಗಿದೆ. ಮಹೇಶ್ ಅವರು ತಾಯಿ, ಓರ್ವ ಸಹೋದರ, ಸಹೋದರಿ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.