ಮುದ್ದೇಬಿಹಾಳ: ತಾಲೂಕಿನ ನಾಗಬೇನಾಳ ತಾಂಡಾದ ರಿ. 84ರ ಜಮೀನಿನಲ್ಲಿ ನಿರ್ಮಿಸಲಾಗುತ್ತಿರುವ ವಿದ್ಯುತ್ ಸ್ಥಾವರದ ಕಾಮಗಾರಿಯನ್ನು ನ್ಯಾಯಾಲಯದ ಆದೇಶ ಬರುವರೆಗೂ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗ್ರೇಡ್- ತಹಶೀಲ್ದಾರ್ ಡಿ.ಜಿ. ಕಳ್ಳಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ಧನಗೌಡ ಬಿರಾದಾರ ಅವರು, ಈಗಾಗಲೇ ವಿದ್ಯುತ್ ಸ್ಥಾವರದ ಕಾಮಗಾರಿ ಸ್ಥಗಿತಗೊಳಿಸುವಂತೆ ಸಿಎಂ, ಸಚಿವರು, ಶಾಸಕರು, ಜಿಲ್ಲಾಧಿಕಾರಿಗೆ ಹಲವಾರು ಮನವಿ ಪತ್ರ ನೀಡಿದ್ದೇವೆ. ಸದರಿ ಜಮೀನಿಗೆ ಸಂಬಂಧಿಸಿದಂತೆ ಈಗಾಗಲೇ ಉಚ್ಛನ್ಯಾಯಾಲಯದ ಉಪ ವಿಭಾಗಾಧಿಕಾರಿಗಳಲ್ಲಿ ಪ್ರಕರಣ ದಾಖಲಿಸಿದ್ದು ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎಲ್ಲ ನ್ಯಾಯಾಲಯಗಳು ಬಂದ್ ಆಗಿವೆ. ಆದರೆ ಸದರಿ ಜಮೀನಿನಲ್ಲಿ ಅಮೃತ ಕನ್ಸ್ಸ್ಟ್ರಕ್ಷನ್ ಕಂಪನಿಯವರು ವಿದ್ಯುತ್ ಸ್ಥಾವರ ಕಾಮಗಾರಿಯನ್ನು ಮತ್ತೆ ಮುಂದುವರೆಸಿದ್ದಾರೆ ಎಂದು ದೂರಿದರು.
ನ್ಯಾಯಾಲಯದ ಅಂತಿಮ ತೀರ್ಮಾನ ಬರುವವರೆಗೂ ಯಾವುದೇ ಕಾರಣಕ್ಕೂ ಅಲ್ಲಿ ಕಾಮಗಾರಿ ನಿರ್ವಹಿಸಬಾರದು. ಒಂದು ವೇಳೆ ಕಾಮಗಾರಿ ಆರಂಭಿಸಿದ್ದೇ ಆದಲ್ಲಿ ತಹಶೀಲ್ದಾರ್ ಕಚೇರಿ ಎದುರಿಗೆ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.