ವಿಜಯಪುರ: ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗಿದ್ದರಿಂದ ನಮ್ಮಲ್ಲಿ ಮಳೆ ಇಲ್ಲದಿದ್ದರೂ ನಾವು ಪ್ರವಾಹದ ಪರಿಸ್ಥಿತಿ ಎದುರಿಸುವಂತಾಗಿದ್ದು, ನಿಡಗುಂದಿ ತಾಲೂಕಿನ ಐದು ಹಳ್ಳಿಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಶಾಸಕ ಎ.ಎಸ್ ಪಾಟೀಲ ನಡಹಳ್ಳಿ ಹೇಳಿದರು.
ಮುದ್ದೇಬಿಹಾಳ ತಾಲೂಕಿ ಮಸೂತಿ, ಬಳಬಟ್ಟಿ, ಯಲ್ಲಮ್ಮನ ಬೂದಿಹಾಳ, ಮುದೂರ ಕಾಶಿನ ಕುಂಟಿ ಗ್ರಾಮಗಳಲ್ಲಿ ಪ್ರವಾಹ ಸ್ಥಳಗಳ ಕುರಿತು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ನೀರು ಹೆಚ್ಚಾಗಿ ಹರಿಬಿಟ್ಟಿದ್ದು, ಲಭ್ಯ ಇರುವ ಕಾಲುವೆಯ ಜಾಲದಿಂದ ಮುದ್ದೇಬಿಹಾಳ ತಾಲೂಕಿನ ಕೆರೆಗಳನ್ನು ತುಂಬಿಸಲು ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಭೂ ಸ್ವಾಧೀನ ಆದ ನಂತರ ಈವರೆಗೆ ನೀರು ಮುಳುಗಡೆ ಆಗಿರುವ ಭೂಮಿ ಸರ್ವೇ ಮಾಡಿ ಅದರ ಬಗ್ಗೆ ಮಾಹಿತಿ ಕಲೆ ಹಾಕಲು ತಿಳಿಸಿದ್ದೇವೆ ಎಂದರು.
ಪ್ರವಾಹ ಸಂದರ್ಭದಲ್ಲಿ ಕೆರೆ ತುಂಬಲು ಸೂಚಿಸಿದ್ದರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ವಿಜಯಕುಮಾರ್ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಪುರಸಭೆ ಸದಸ್ಯರಾದ ಶರಣು ಬೂದಿಹಾಳಮಠ, ಮನೋಹರ ತುಪ್ಪದ, ಬಸವರಾಜ ಗುಳಬಾಳ ಮುಂತಾದವರು ಉಪಸ್ಥಿತರಿದ್ದರು.