ಮುದ್ದೇಬಿಹಾಳ: ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಅನುಕೂಲವಾಗಲೆಂದು ಸಹಕಾರಿ ಪತ್ತಿನ ಸಂಘವನ್ನು ಆರಂಭಿಸಿದ್ದು, ಅದರಡಿ ಎಂಟನೇ ಶಾಖೆಯನ್ನು ಮುದ್ದೇಬಿಹಾಳ ನಗರದಲ್ಲಿ ಆರಂಭಿಸಲಾಗುತ್ತಿದೆ ಎಂದು ಬಾಲಾಜಿ ಶುಗರ್ಸ್ ಸದಸ್ಯ ರಾಹುಲ್‌ಗೌಡ ಪಾಟೀಲ ತಿಳಿಸಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಶ್ರೀ ಶರಣಬಸವೇಶ್ವರ ಕಾಂಪ್ಲೆಕ್ಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರಿಗೆ ಕಬ್ಬು ಪೂರೈಸಿದ ತಕ್ಷಣ ಹಣ ದೊರೆಯಬೇಕು ಎಂಬ ಆಶಯವಿರುತ್ತದೆ. ರೈತರ ಹಿತದೃಷ್ಟಿಯಿಂದ ಕಾರ್ಖಾನೆಯಿಂದ ಸುಂದರಾ ಸೌಹಾರ್ದ ಪತ್ತಿನ ಸಹಕಾರಿ ಸಂಘವನ್ನು ಸ್ಥಾಪಿಸಲಾಗಿದೆ. ಸದ್ಯಕ್ಕೆ ಬಾಗಲಕೋಟೆಯಲ್ಲಿ ಪ್ರಧಾನ ಶಾಖೆಯನ್ನು ಹೊಂದಿರುವ ಸಂಘಕ್ಕೆ ಅಮಿನಗಡ, ಮುಧೋಳ, ಕೂಡಲಸಂಗಮ ಕ್ರಾಸ್, ರಾಂಪೂರ, ನಿಡಗುಂದಿ, ಯರಗಲ್ ಹಾಗೂ ನಾಲತವಾಡದಲ್ಲಿ ಶಾಖೆಗಳು ಕಾರ್ಯಾರಂಭ ಮಾಡಿವೆ. ಆದರೆ, ಹಲವು ರೈತರ ಬೇಡಿಕೆಯಾಗಿದ್ದ ಮುದ್ದೇಬಿಹಾಳ ಶಾಖೆಯನ್ನು ಅ.11 ರಂದು ಬೆಳಗ್ಗೆ 10.30ಕ್ಕೆ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಸಲಹಾ ಸಮಿತಿ ಅಧ್ಯಕ್ಷ ವಿಕ್ರಂ ಓಸ್ವಾಲ್ ಮಾತನಾಡಿ, ಕೋವಿಡ್-19 ವೈರಸ್ ಭೀತಿಯ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತದೆ. ಹಿರೂರ ಜಯಸಿದ್ದೇಶ್ವರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಜಿ.ಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮತ್ತಿತರ ಗಣ್ಯರು ಆಗಮಿಸುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಲಹಾ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಮದರಿ, ಶರಣು ಸಜ್ಜನ, ಸುನೀಲ್ ಇಲ್ಲೂರು, ರಾಜುಗೌಡ ಗೌಡರ, ಮಾರುತಿ ಗುರವ, ವ್ಯವಸ್ಥಾಪಕ ಎಸ್.ವಿ.ಕುದರಿ ಇದ್ದರು.