ವಿಜಯಪುರ: ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಕನ್ನೂರ ಗ್ರಾಮದಲ್ಲಿ ಮನೆ ಮೇಲ್ಛಾವಣಿ ಕುಸಿದು ಓರ್ವ ವೃದ್ಧೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಶಿವಮ್ಮ ಸಾವಳಗಿ (60) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಜಿಟಿ ಜಿಟಿ ಮಳೆಯಿಂದ ಮನೆಯ ಗೋಡೆ ಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಆರಂಭವಾಗಿರುವ ಜಿಟಿ ಜಿಟಿ ಮಳೆಯಿಂದ ಈವರೆಗೆ 12.31 ಮಿಮೀ ಮಳೆ ದಾಖಲಾಗಿದೆ. ವಿಜಯಪುರ ತಾಲೂಕಿನಲ್ಲಿ 9.26 ಮಿಮೀ, ಬಬಲೇಶ್ವರ ತಾಲೂಕಿನಲ್ಲಿ 20.1 ಮಿ.ಮೀ, ತಿಕೋಟಾ ತಾಲೂಕಿನಲ್ಲಿ 5.7 ಮಿಮೀ, ಬಸವನಬಾಗೇವಾಡಿ ತಾಲೂಕಿನಲ್ಲಿ 8.16 ಮಿಮಿ, ನಿಡಗುಂದಿ ತಾಲೂಕಿನಲ್ಲಿ 1.45 ಮಿ.ಮೀ, ಕೊಲ್ಹಾರ ತಾಲೂಕಿನಲ್ಲಿ 13.00 ಮಿಮೀ, ಮುದ್ದೇಬಿಹಾಳ ತಾಲೂಕಿನಲ್ಲಿ 12.6 ಮಿ.ಮೀ, ಇಂಡಿ ತಾಲೂಕಿನಲ್ಲಿ 17.32 ಮಿ.ಮೀ, ಚಡಚಣ ತಾಲೂಕಿನಲ್ಲಿ 26.0 ಮಿಮೀ, ಸಿಂದಗಿ ತಾಲೂಕಿನಲ್ಲಿ 10.1 ಮಿಮೀ ಹಾಗೂ ದೇವರಹಿಪ್ಪರಗಿ ತಾಲೂಕಿನಲ್ಲಿ 24.06 ಮಿಮೀ ಮಳೆಯಾಗಿದೆ. ಆದ್ರೆ ತಾಳಿಕೋಟೆ ತಾಲೂಕಿನಲ್ಲಿ ಮಳೆಯಾಗಿಲ್ಲ.
ಕಳೆದ 24 ಗಂಟೆಗಳಲ್ಲಿ ಸಹಜವಾಗಿ 16.2 ಮಿ.ಮೀ ಮಳೆಯಾಗಬೇಕಾಗಿತ್ತು. ಆದರೆ 42.8 ಮಿ. ಮೀ ಮಳೆಯಾಗಿದೆ. ಒಟ್ಟು 20 ಮನೆಗಳು ಭಾಗಶ: ಹಾನಿಗೊಳಗಾಗಿವೆ. ಇನ್ನೂ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ. ಸದ್ಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆಗಳಿಲ್ಲ ಎಂದಿದ್ದಾರೆ.
ಮಳೆ ಮಧ್ಯೆ ಭೂಕಂಪನ: ಜಿಲ್ಲೆಯಲ್ಲಿ ಮಳೆ ಮಧ್ಯೆ ಭೂಮಿ ಕಂಪಿಸಿದ ಅನುಭವ ಆಗಿದೆ. ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ 9-55ಕ್ಕೆ ಭೂಮಿ ನಡುಗಿದೆ. ಜಿಟಿ ಜಿಟಿ ಮಳೆ ನಡುವೆ ಭೂಕಂಪನವಾಗಿದ್ದು, ಜನರು ಭಯಭೀತರಾಗಿದ್ದಾರೆ. ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಭೂಕಂಪನದ ಅನುಭವವಾಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ರಿಕ್ಟರ್ ಮಾಪಕದಲ್ಲಿ 2.4ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನ ಹಾಗೂ ಜಿಟಿ ಜಿಟಿ ಮಳೆಯಿಂದ ಮಣ್ಣಿನ ಮನೆಯ ಗೋಡೆಗಳು ಬಿರುಕುಬಿಟ್ಟಿವೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಆಗಾಗ ಭೂಕಂಪನದ ಅನುಭವ ಆಗುತ್ತಿದೆ. ಜಿಲ್ಲಾಡಳಿತ ಭೂಕಂಪನ ಮಾಪನ ತಜ್ಞರನ್ನು ಕರೆಯಿಸಿ ಪರಿಶೀಲನೆ ಸಹ ನಡೆಸಿತ್ತು. 'ಆಲಮಟ್ಟಿ ಜಲಾಶಯವಿರುವ ಕಾರಣ ಅಂತರ್ಜಲ ಹೆಚ್ಚಾದಾಗ ಭೂಮಿ ಕಂಪಿಸುವುದು ಸಹಜವಾಗಿರುತ್ತದೆ. ಆದರೆ ದೊಡ್ಡ ಪ್ರಮಾಣದಲ್ಲಿ ಭೂಕಂಪನ ಆಗುವುದಿಲ್ಲ. ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ' ಎಂದು ತಿಳಿಸಿದ್ದರು.
ರಾತ್ರಿ ವೇಳೆ ಭೂಕಂಪನವಾದ ಮೇಲೆ ಜನ ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದು ಬಯಲಲ್ಲಿ ಮಲಗುವ ಪರಿಸ್ಥಿತಿ ಸಹ ಸಾಕಷ್ಟು ನಿರ್ಮಾಣವಾಗಿತ್ತು. ಈಗ ಮಳೆಗಾಲ ಇರುವ ಕಾರಣ. ಆಲಮಟ್ಟಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿರುವ ಕಾರಣ ಕೃಷ್ಣಾ ತಟದಲ್ಲಿ ಭೂಕಂಪನವಾಗುವುದು ಸಹಜ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಮುಂದುವರೆದ ಮಳೆ ಆರ್ಭಟ.. ಮನೆ ಕುಸಿದು ಮಗು ಸಾವು, ತಂದೆಗೆ ಗಂಭೀರ ಗಾಯ