ವಿಜಯಪುರ : ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಭೀಮಾ ತೀರದಲ್ಲಿ ವ್ಯಾಪಕವಾಗಿ ನಿಷೇಧಿತ ಮಾದಕ ದ್ರವ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಇದರಲ್ಲಿ ಪ್ರಭಾವಿಗಳು, ಅಧಿಕಾರಿಗಳೇ ಶಾಮೀಲಾಗಿದ್ದಾರೆ ಅಂತಾ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚೌಹಾಣ್ ಆರೋಪಿಸಿದ್ದಾರೆ.
ಈಗ ಮಹಾರಾಷ್ಟ್ರದಲ್ಲಿ ಅನುಮತಿ ಇರುವ ಗುಟ್ಕಾ, ಮಾವಾವನ್ನು ನಿಷೇಧಿತ ಪ್ರದೇಶವಾಗಿರುವ ಕರ್ನಾಟಕದಲ್ಲಿ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ. ಇದರ ಜತೆ ಗಾಂಜಾ ಸೇರಿ ಇತರೆ ಮಾದಕ ದ್ರವ್ಯಗಳು ಮಹಾರಾಷ್ಟ್ರದಿಂದ ಎಗ್ಗಿಲ್ಲದೆ ಸರಬರಾಜು ಮಾಡಲಾಗುತ್ತಿದೆ. ಇದನ್ನ ಭೀಮಾತೀರದ ವ್ಯಾಪ್ತಿಯ ನಾಗಠಾಣ ಶಾಸಕ ದೇವಾನಂದ ಚೌಹಾಣ್ ಬಹಿರಂಗಪಡಿಸಿದ್ದಾರೆ. ಭೀಮಾತೀರದ ಚಡಚಣ ಸೇರಿ ಸುತ್ತಮುತ್ತಲಿನಲ್ಲಿ ನಿತ್ಯ ಬರೋಬ್ಬರಿ 50 ಲಕ್ಷ ರೂ. ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಭೀಮಾತೀರದಲ್ಲಿ ಮರಳು ಮಾಫಿಯಾ ಕುರಿತು ಸಾಕಷ್ಟು ದೂರನ್ನ ಅಧಿಕಾರಿಗಳಿಗೆ ನೀಡಲಾಗಿತ್ತು. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ. ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಸಹ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲು ಡಿಸಿ ನೇತೃತ್ವದ ಜಿಲ್ಲಾ ಮಟ್ಟದ ಕಮಿಟಿ ಸಹ ಈ ಹಿಂದೆ ರಚಿಸಲಾಗಿದೆ. ಹೆಚ್ಚಿನ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲು ಸಿದ್ಧವಿರುವುದಾಗಿ ಡಿಸಿ ಸಹ ಡ್ರಗ್ಸ್ ಮಾಫಿಯಾ ಕಿಂಗ್ಪಿನ್ಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಜಿಲ್ಲೆಯಲ್ಲಿ ಕದ್ದುಮುಚ್ಚಿ ಹೊಲದಲ್ಲಿ ಗಾಂಜಾ ಬೆಳೆದು ಮಾರಾಟ ಸಹ ಮಾಡಲಾಗುತ್ತಿದೆ. ಇದರ ಜತೆ ಮಹಾರಾಷ್ಟ್ರದಿಂದ ಡ್ರಗ್ಸ್ ಸೇರಿ ಎಲ್ಲ ರೀತಿಯ ಮಾದಕ ದ್ರವ್ಯ ಸರಬರಾಜು ಆಗುತ್ತಲೇ ಇದೆ. ಈ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸಹ ಕರ್ನಾಟಕಕ್ಕೆ ಮಾದಕ ದ್ರವ್ಯ ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶಗಳಿಂದ ಬರುತ್ತಿರುವ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಮೂಲಕ ಈಗ ಭೀಮಾತೀರ ಮತ್ತೊಮ್ಮೆ ಸುದ್ದಿಗೆ ಬಂದಂತಾಗಿದೆ.