ವಿಜಯಪುರ: ಸಿಂದಗಿಯಲ್ಲಿ ಕಿತ್ತೂರ ರಾಣಿ ಚೆನ್ನಮ್ಮನವರ ವೃತ್ತದ ನಿರ್ಮಾಣಕ್ಕೆ, ಆಲಮೇಲದ ಶೌಕತ್ ಅಲಿ ಕಾಶಿಂಸಾಬ ಸುಂಬಡ ಎಂಬ ಮುಸ್ಲಿಂ ವ್ಯಕ್ತಿ ಉಚಿತವಾಗಿ ಭೂಮಿ ದಾನ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದ್ದಾರೆ. ಕೊಕನೂರ ಹಳೆ ರಸ್ತೆಯ ಹತ್ತಿರ 425 ಚದರ ಅಡಿ ಭೂಮಿಯನ್ನು ದಾನವಾಗಿ ನೀಡಿ, ಎಲ್ಲರಿಗೂ ಮಾದರಿಯಾಗಿದ್ದಾರೆ.
ವಿಜಯಪುರ ಮುಖ್ಯರಸ್ತೆಯ ಮಧ್ಯದಲ್ಲಿದ್ದ ಚೆನ್ನಮ್ಮ ವೃತ್ತವನ್ನು ರಸ್ತೆ ವಿಸ್ತರಣೆಗಾಗಿ ತಾಲೂಕು ಆಡಳಿತ ತೆರವುಗೊಳಿಸಿತ್ತು. ಪಂಚಮಸಾಲಿ ಮುಖಂಡರು ತಕ್ಷಣ ಚೆನ್ನಮ್ಮ ವೃತ್ತ ನಿರ್ಮಿಸಬೇಕೆಂದು ಪಟ್ಟು ಹಿಡಿದಿದ್ದರು. ಮೊದಲಿದ್ದ ಸ್ಥಳದಲ್ಲಿ ವೃತ್ತ ನಿರ್ಮಿಸಿ ಪೂಜೆ ಸಲ್ಲಿಸಲಾಗಿತ್ತು. ತಾಲೂಕು ಆಡಳಿತ ಎರಡನೇ ಬಾರಿಯೂ ವೃತ್ತ ತೆರವುಗೊಳಿಸಿತ್ತು. ಆದರೆ 8 ದಿನಗಳಲ್ಲಿ ವೃತ್ತ ನಿರ್ಮಿಸದಿದ್ದರೆ ಸಿಂದಗಿ ಬಂದ್ ಮಾಡುವುದಾಗಿ ಪಂಚಮಸಾಲಿ ಸಮಾಜದ ಮುಖಂಡರು ಎಚ್ಚರಿಕೆ ನೀಡಿದ್ದರು.
ವೃತ್ತ ತೆರವುಗೊಳಿಸಿರುವ ರಸ್ತೆ ಬದಿಯ ಖಾಸಗಿ ಭೂಮಿಯಲ್ಲಿ, ವೃತ್ತ ನಿರ್ಮಾಣಕ್ಕೆ ಪಂಚಮಸಾಲಿ ಸಮಾಜದ ಮುಖಂಡರು ನಿರ್ಧರಿಸಿದ್ದಾರೆ. ಆ ಭೂಮಿಯ ಒಡೆಯ ಶೌಕತ್ ಅಲಿ ಅವರು ಭೂಮಿ ದಾನ ಮಾಡಿದ್ದು, ತಾಲೂಕು ಆಡಳಿತಕ್ಕೆ ತಲೆನೋವಾಗಿದ್ದ ಸಮಸ್ಯೆ ಕೊನೆಗೂ ಸುಖಾಂತ್ಯ ಗೊಂಡಿದೆ.
ಶಾಸಕ ಎಂ. ಸಿ. ಮನಗೂಳಿಯವರ ಪುತ್ರ ಅಶೋಕ ಮನಗೂಳಿಯವರ ಪ್ರಯತ್ನದ ಫಲವಾಗಿ, ಸಿಂದಗಿಯಲ್ಲಿ ಮಾದರಿಯ ವೃತ್ತ ನಿರ್ಮಾಣವಾಗಲಿದೆ ಎಂದು ರಾಣಿ ಚೆನ್ನಮ್ಮ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಹಳೆ ಕೊಕನೂರ ರಸ್ತೆಯನ್ನು ಶಾಸಕರ ಅನುದಾನಲ್ಲಿ ಶೀಘ್ರವಾಗಿ ಪೂರ್ತಿ ಸಿಸಿ ರೋಡ್ ಮಾಡುವುದಾಗಿ ಅಶೋಕ ಮನಗೂಳಿ ತಿಳಿಸಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮ ಅಭಿಮಾನಿಗಳು ಹಾಗೂ ಸಿಂದಗಿ ತಾಲೂಕಿನ ನೂತನ ಕಿತ್ತೂರು ರಾಣಿ ಚೆನ್ನಮ್ಮ ಸಂಘದ ಪದಾಧಿಕಾರಿಗಳು ಸುಂಬಡ ಅವರಿಗೆ ಕೃತಜ್ಞತೆಗಳು ತಿಳಿದ್ದಾರೆ.