ವಿಜಯಪುರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಕಳೆದ ಎರಡು ವರ್ಷಗಳಿಂದ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದೇವೆ. ಈಗ ಕೊನೆಯ ಹಂತವಾಗಿ ಡಿ.22ರಂದು ಬೆಳಗಾವಿಯ ಸುವರ್ಣ ಸೌಧದದ ಎದುರು ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಸಮಾಜದ ಮುಖಂಡ ಎಂ ಎಸ್ ರುದ್ರಗೌಡರ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಸಿಎಂ ನೀಡಿದ್ದ ಗಡುವು ಇದೇ 19ರಂದು ಮುಗಿಯಲಿದ್ದು, ಅಷ್ಟರೊಳಗಾಗಿ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಘೋಷಣೆ ಮಾಡಿದರೆ ಅವರನ್ನು ಸುವರ್ಣ ಸೌಧದ ಆವರಣದಲ್ಲಿ ಅಭಿನಂದಿಸಲಾಗುವುದು. ಮೀಸಲಾತಿ ಘೋಷಣೆ ಮಾಡದಿದ್ದರೆ 25ಲಕ್ಷಕ್ಕೂ ಹೆಚ್ಚು ಜನ ಸಮಾಜದವರು ಅಹೋರಾತ್ರಿ ಧರಣಿ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಈ ಮೊದಲು ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಈ ಸಂಬಂಧ ಕ್ಯಾಬಿನೆಟ್ ಕರೆದು ನಿರ್ಣಯವನ್ನು ಡಿ19ರೊಳಗೆ ಪ್ರಕಟಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಸಮಾಜ ಆ ಪ್ರಕಟಣೆಗಾಗಿ ಕಾಯುತ್ತಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡದಿದ್ದರೆ ನಮ್ಮ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.
ಡಿ.19ರಂದು ಸವದತ್ತಿಯಿಂದ ಬೆಳಗಾವಿ ಸುವರ್ಣ ಸೌಧದವರೆಗೆ ಪಾದಯಾತ್ರೆ ನಡೆಸಿ ಸಮಾಜದ ಜನರ ಜತೆ ಹೋರಾಟ ನಡೆಸಲಾಗುವುದು ಎಂದರು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಹರಿಹರದ ವಚನಾನಂದ ಶ್ರೀಗಳು ಹೋರಾಟ ಆರಂಭಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ರುದ್ರಗೌಡರ, ಮೊದಲು ಹೋರಾಟ ಆರಂಭವಾದಾಗ ಒಬ್ಬರು ಸ್ವಾಮೀಜಿ, ಓರ್ವ ಮಂತ್ರಿ ಮಾತ್ರ ಭಾಗವಹಿಸಿದ್ದರು. ಈಗ ಮೀಸಲಾತಿ ದೊರೆಯುವ ಕೊನೆ ಗಳಿಗೆಯಲ್ಲಿ ಮತ್ತೊಬ್ಬ ಸ್ವಾಮೀಜಿ, ಮಂತ್ರಿಗಳು ಕೈಜೋಡಿಸುತ್ತಿದ್ದಾರೆ. ಇದು ಸಂತೋಷದ ವಿಷಯ, ನಮಗೆ ಮತ್ತಷ್ಟು ಬಲ ಬಂದಿದೆ ಎಂದರು.
ಹೋರಾಟ ಮಾಡದವರು ಸಹ ಇದರ ಲಾಭ ಪಡೆಯಲು ಮುಂದಾಗಿದ್ದಾರೆ. ಅದೇನೇ ಇರಲಿ, ನಮ್ಮ ಸಮಾಜಕ್ಕೆ ಮೀಸಲಾತಿ ದೊರೆಯಬೇಕು. ಯಾರೇ ಬೆಂಬಲಿಸಿ ಬಂದರು ಸಹ ನಮ್ಮದೇನು ಆಕ್ಷೇಪ ಇಲ್ಲ. ಬೆಳಗಾವಿ ಸುವರ್ಣಸೌಧ ಬಳಿ ನಡೆಯುವ ಹೋರಾಟಕ್ಕೆ ಬೆಂಬಲ ಸೂಚಿಸಿ ಬರುವವರಿಗೆ ನಾವು ಬೇಡ ಎನ್ನುವುದಿಲ್ಲ, ಕೂಡಲಸಂಗಮ ಶ್ರೀಗಳ ನೇತ್ವತೃದಲ್ಲಿ ಈ ಹೋರಾಟ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಬೆಳಗಾವಿಯಲ್ಲಿ ಇಂದು ಕಾಂಗ್ರೆಸ್ ಚುನಾವಣಾ ಸಮಿತಿಯ ಮೊದಲ ಸಭೆ.. ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ