ಬೆಳಗಾವಿ: ಬಿಜೆಪಿ ಶಾಸಕರ ವಿಭಿನ್ನ ಹೇಳಿಕೆಗಳು ಸರ್ಕಾರದ ಅಸ್ಥಿರತೆಗೆ ಕಾರಣವಾಗಲಿದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸರ್ಕಾರದ ಅಸ್ಥಿರತೆಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ. ಬಿಜೆಪಿಯ ಆಂತರಿಕ ವಿಚಾರಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಆದರೆ ಈ ರೀತಿಯ ಹೇಳಿಕೆಗಳು ಸರ್ಕಾರದಲ್ಲಿ ಅಸ್ಥಿರತೆ ಹುಟ್ಟುಹಾಕಬಹುದು ಎಂದು ಹೇಳಿದರು.
ಭೀಕರ ಪ್ರವಾಹಕ್ಕೆ ರಾಜ್ಯದ ಜನತೆ ಹಾಗೂ ರೈತರು ತತ್ತರಿಸಿ ಹೋಗಿದ್ದು, ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇವಲ ಮೂರು ದಿನಗಳ ಕಾಲ ಅಧಿವೇಶನ ಕರೆದಿರುವುದು ಸರಿಯಾದ ಕ್ರಮವಲ್ಲ. ಕನಿಷ್ಠ 8 ದಿನಗಳಾದರೂ ಅಧಿವೇಶನ ಕರೆದಿದ್ರೆ ಪ್ರವಾಹದ ಬಗ್ಗೆ ಚರ್ಚಿಸಲು ಅನುಕೂಲವಾಗುತ್ತಿತ್ತು ಎಂದ ದೇಶಪಾಂಡೆ, ಅಧಿವೇಶನ ಅವಧಿ ವಿಸ್ತರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆಂದು ಹೇಳಿದರು.
ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ, ಹೆಚ್.ಕೆ.ಪಾಟೀಲ್ ಇಬ್ಬರೂ ಅರ್ಹರಿದ್ದಾರೆ. ಆದರೆ ಪ್ರತಿಪಕ್ಷ ನಾಯಕ ಯಾರಾಗಲಿದ್ದಾರೆಂಬುದನ್ನು ಹೈಕಮಾಂಡ್ ನಿರ್ಣಯ ಮಾಡಲಿದೆ ಎಂದರು.
ಇನ್ನು ರಾಜ್ಯದ ಕೆಲ ಪ್ರದೇಶಗಳಲ್ಲಿ ನೆರೆ ಪ್ರವಾಹ ಹಾಗೂ ಕೆಲ ಪ್ರದೇಶಗಳಲ್ಲಿ ಬರಗಾಲ ಉಂಟಾಗಿದೆ. ಅಧಿವೇಶನನದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾದ ಸಮಸ್ಯೆಗಳ ಬಗ್ಗೆ ನಾವು ದನಿ ಎತ್ತಲಿದ್ದೇವೆ ಎಂದು ತಿಳಿಸಿದರು. ಹಾಗೆಯೇ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಸುವಂತೆ ಆಗ್ರಹ ಮಾಡಿದ್ದೇವೆ ಎಂದು ಹೇಳಿದರು.