ವಿಜಯಪುರ: ಮದ್ಯ ಸಿಗದೇ ಕುಡುಕರು ಮದ್ಯದಂಗಡಿಗಳ ಬೀಗ ಮುರಿಯುತ್ತಿದ್ದಾರೆ. ಇದರಿಂದ ಹೆಚ್ಚು ಭೀತಿಗೊಳಗಾಗಿರುವ ಜಿಲ್ಲೆಯ ಅಬಕಾರಿ ಇಲಾಖೆ, ಲಾಕ್ಡೌನ್ ನಂತರ ಜಪ್ತಿ ಮಾಡಿರುವ ಲಕ್ಷಾಂತರ ರೂ. ಮೌಲ್ಯದ ಮದ್ಯವನ್ನು ಕಳ್ಳರಿಂದ ರಕ್ಷಿಸುವ ಸವಾಲು ಎದುರಿಸುತ್ತಿದೆ.
ವಿಜಯಪುರ ಅಬಕಾರಿ ಇಲಾಖೆ ಕಚೇರಿ ಶಿಕಾರಿಖಾನೆ ಹೊರವಲಯದಲ್ಲಿರುವ ಕಾರಣ ಕಳ್ಳರು ಬೀಗ ಮುರಿದು ಮದ್ಯ ಕಳ್ಳತನ ಮಾಡುತ್ತಾರೆಂಬ ಭೀತಿ ಇದೆ. ಜಿಲ್ಲೆಯಲ್ಲಿ ಲಾಕ್ಡೌನ್ ಆದ ನಂತರ ಮದ್ಯ ಮಾರಾಟ ಸ್ಥಗಿತಗೊಂಡಿದೆ. ಇದರಿಂದ ಕಳ್ಳಭಟ್ಟಿ ಸರಾಯಿ ಮಾರಾಟ ಹೆಚ್ಚಾಗಿದೆ. ಇಲ್ಲಿಯವರೆಗೆ ಅಬಕಾರಿ ಇಲಾಖೆ 457 ಕಡೆ ದಾಳಿ ಮಾಡಿದೆ. 338 ಲೀಟರ್ ಸಾರಾಯಿ, 334 ಲೀಟರ್ ಬಿಯರ್, 21 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ 43 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಎರಡು ಮದ್ಯದಂಗಡಿ ಲೈಸನ್ಸ್ ರದ್ದು ಮಾಡಲು ಶಿಫಾರಸು ಮಾಡಲಾಗಿದೆ.
ಲಾಕ್ಡೌನ್ ಆಗಿ ಸುಮಾರು 25 ದಿನಗಳು ಕಳೆದಿವೆ. ಇಷ್ಟು ದೀರ್ಘ ಕಾಲ ಮದ್ಯ ಮಾರಾಟ ನಿಷೇಧ ಮಾಡಿರುವುದು ತುಂಬಾ ಕಡಿಮೆ. ಲಾಕ್ಡೌನ್ ಹೀಗೆಯೇ ಮುಂದುವರೆದರೆ ಅಬಕಾರಿ ಇಲಾಖೆ ಕಚೇರಿಯಲ್ಲೂ ಕಳ್ಳತನವಾಗುವ ಭಯದ ವಾತಾವರಣ ನಿರ್ಮಾಣವಾಗಿದೆ.