ವಿಜಯಪುರ : ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ದಿನೇದಿನೆ ತಾಪಮಾನ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಡವರ ಫ್ರಿಡ್ಜ್ ಎಂದೇ ಹೆಸರು ಹೊಂದಿರುವ ಮಣ್ಣಿನ ಮಡಿಕೆಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಜನರು ಮಣ್ಣಿನ ಮಡಿಕೆಗಳಿಗೆ ಮೊರೆಹೋಗುತ್ತಿರುವ ದೃಶ್ಯ ಬಿಸಿಲನಾಡು ವಿಜಯಪುರದಲ್ಲಿ ಈಗ ಹೆಚ್ಚಾಗಿ ಕಂಡುಬರುತ್ತಿದೆ. ಶ್ರೀಮಂತರು ದುಬಾರಿ ಬೆಲೆಯ ಫ್ರಿಡ್ಜ್ ಖರೀದಿಸಿ, ಅದರಿಂದ ತಂಪಾದ ನೀರು ಕುಡಿಯುತ್ತಾರೆ. ಆದರೆ, ಬಡವರಿಗೆ ಅಷ್ಟೊಂದು ಬೆಲೆ ತೆತ್ತು, ಫ್ರಿಡ್ಜ್ ಖರೀದಿಸಲು ಸಾಧ್ಯವಾಗದೇ ಇರುವುದರಿಂದ ಬೇಸಿಗೆಯ ಬಿಸಿಲ ತಾಪಕ್ಕಾಗಿ ತಣ್ಣನೆಯ ನೀರು ಕುಡಿಯಲು ಮಣ್ಣಿನ ಮಡಿಕೆ ಖರೀದಿಸುತ್ತಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಹೆಚ್ಚು ತಾಪಮಾನವಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಬಡವರು ಈಗಾಗಲೇ ಮಣ್ಣಿನ ಮಡಿಕೆಗಳನ್ನು ಖರೀದಿಸಿಟ್ಟುಕೊಂಡು ತಣ್ಣಗಿನ ನೀರು ಕುಡಿಯಲು ಮುಂದಾಗಿದ್ದಾರೆ.
ಒಂದು ಮಡಿಕೆಗೆ ಸರಿಸುಮಾರು 200 ರಿಂದ 300 ರೂ. ಇದೆ. ಮಡಿಕೆಯಲ್ಲಿನ ನೀರು ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಕಡಿಮೆ ಬೆಲೆಯಲ್ಲಿ ತಂಪಾದ ನೀರು ಕುಡಿಯಬಹುದು ಅನ್ನೋದು ಮಡಿಕೆ ಅಂಗಡಿ ಮಾಲೀಕರ ಮಾತಾಗಿದೆ.