ವಿಜಯಪುರ: ಹಣ್ಣುಗಳ ರಾಜನಿಗೆ ಈ ಬಾರಿ ಭಾರಿ ಬೇಡಿಕೆ ಹೆಚ್ಚಾಗಿದೆ. ಕಳೆದ ವರ್ಷ ಕೊರೊನಾದಿಂದ ನಷ್ಟ ಅನುಭವಿಸಿದ್ದ ರೈತರು ಈ ಬಾರಿ ಹೆಚ್ಚು ಮಾವಿನ ಹಣ್ಣು ಬೆಳೆಯಲು ನಿರಾಸಕ್ತಿ ತೋರಿದ್ದಾರೆ. ಕೊರೊನಾ ಆತಂಕ, ಮಧ್ಯವರ್ತಿಗಳ ಹಾವಳಿಯಿಂದ ಮಾವು ಬೆಳೆಗಾರರು ಪರ್ಯಾಯ ಬೆಳೆಯುತ್ತ ಮುಖ ಮಾಡಿರುವುದರಿಂದ ಮಾರುಕಟ್ಟೆಗೆ ಅಷ್ಟಾಗಿ ಮಾವು ಬಂದಿಲ್ಲ. ಇದರಿಂದಾಗಿ ಮಾವಿನ ಹಣ್ಣುಗಳ ಬೆಲೆ ಹೆಚ್ಚಾಗುವಂತಾಗಿದೆ.
ಗುಮ್ಮಟನಗರಿ ವಿಜಯಪುರ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಈ ಭಾಗದ ಮಾವಿನ ಹಣ್ಣಿನ ರುಚಿಗೆ ಮನಸೋತು ಹೆಚ್ಚು ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ಈ ಬಾರಿ ಅವರ ಸಂಖ್ಯೆ ಹೆಚ್ಚಾಗಿರುವ ಕಾರಣ ವಿವಿಧ ತಳಿಗಳ ಮಾವಿನ ಹಣ್ಣಿನ ಬೆಲೆ ಮತ್ತಷ್ಟು ಗಗನಕ್ಕೆ ಏರಿದೆ. ಆಂಧ್ರಪ್ರದೇಶದ ಅನಂತಪುರ, ಹಿಂದುಪುರ ಸೇರಿದಂತೆ ಕರ್ನಾಟಕದ ಗೌರಿಬಿದನೂರಿನಿಂದ ಹೆಚ್ಚು ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ವಿಜಯಪುರ ಎಪಿಎಂಸಿಗೆ ಮಾವು ಬೆಳೆಗಾರರು ತಮ್ಮ ಹಣ್ಣುಗಳನ್ನು ತಂದರೆ ಅದಕ್ಕೆ ಹೆಚ್ಚು ಬೆಲೆ ಬರುತ್ತಿಲ್ಲ. ಹರಾಜು ಕೂಗುವಾಗ ಮಧ್ಯವರ್ತಿಗಳ ತಟಸ್ಥ ನಿಲುವು, ಮಾವು ಬೆಳೆಗಾರರು ಬಂದಷ್ಟು ರೇಟ್ ನೀಡಿ ಮಾವು ಮಾರಾಟ ಮಾಡಿ ಹೋಗುತ್ತಿದ್ದಾರೆ.
ಕಡಿಮೆ ಬೆಲೆಗೆ ಮಾವು ಖರೀದಿಸುವ ಮಧ್ಯವರ್ತಿಗಳು ಅವುಗಳನ್ನು ಸ್ಥಳೀಯ ವ್ಯಾಪಾರಿಗಳಿಗೆ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ. ಈ ಬಾರಿ ಒಂದು ಡಜನ್ ಲೆಕ್ಕದಲ್ಲಿ ವಿವಿಧ ತಳಿಗಳ ಮಾವುಗಳ ಬೆಲೆ ಬೇರೆ ಬೇರೆಯಾಗಿದೆ. ಸಿಂಧೂರ ಹಣ್ಣಿಗೆ 950 ರೂ, ತೋತಾಪುರಿ 400-500, ನಾಟಿ ಜವಾರಿ 400 ರೂ., ಬಾದಾಮಿಗೆ 1500 ರೂ. ಹಾಗೂ ಉಪ್ಪಿನಕಾಯಿ ಮಾಡುವ ಹಸಿ ಹಣ್ಣಿಗೆ 500-1500ರೂ. ವರೆಗೆ ಮಾರಾಟವಾಗುತ್ತಿದೆ.
ಪ್ರತಿ ವರ್ಷ ಟನ್ಗಟ್ಟಲೆ ಮಾವು ವಿಜಯಪುರ ಮಾರುಕಟ್ಟೆಗೆ ಬರುತ್ತಿತ್ತು. ಈ ಬಾರಿ ಬೆಳೆಗಾರರ ನಿರಾಸಕ್ತಿಯಿಂದ ಮಾವು ಸರಬರಾಜು ಕಡಿಮೆಯಾಗಿದೆ. ಇದೇ ರೀತಿ ಮುಂದುವರೆದರೆ ಗ್ರಾಹಕರಿಗೆ ಮಾವು ಹುಳಿಯಾಗಲಿದೆ.
(ಓದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾವು; ಅಂಕೋಲಾದ ಕರಿ ಈಶಾಡಿಗೆ ಹೆಚ್ಚಿದ ಬೇಡಿಕೆ)