ವಿಜಯಪುರ : ಇಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಜಯಪುರ ಹೊರ ವಲಯದ ಬುರಣಾಪುರ-ಮದಭಾವಿ ಗ್ರಾಮದ ಜಾಗದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಜತೆ ಜಿಲ್ಲೆಯ ಅಭಿವೃದ್ಧಿಯಾಗಬೇಕಾಗಿದೆ. ವಿಮಾನ ನಿಲ್ದಾಣ ಜಿಲ್ಲೆಗೆ ಅತ್ಯವಶ್ಯವಾಗಿದೆ. ಈ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು 15-20 ದಿನಕ್ಕೊಮ್ಮೆ ಕಾಮಗಾರಿ ವೀಕ್ಷಣೆಗೆ ಖುದ್ದು ಆಗಮಿಸುವುದಾಗಿ ಹೇಳಿದರು.
ವಿಮಾನ ನಿಲ್ದಾಣ ಕಾಮಗಾರಿಗೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಗುತ್ತಿಗೆಗೆ ಟೆಂಡರ್ ಕರೆಯಲಾಗಿದೆ. ಸೆಪ್ಟೆಂಬರ್ 29 ರೊಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇನ್ನೆರಡು ತಿಂಗಳಲ್ಲಿ ಸಿಎಂ ಯಡಿಯೂರಪ್ಪ ಅವರಿಂದ ಕಾಮಗಾರಿ ಆರಂಭಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ವಿಮಾನ ನಿಲ್ದಾಣ ಕಾಮಗಾರಿಯ ಮೊದಲು ಹಂತದ ಯೋಜನೆಗೆ 95 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ. ಎರಡು ಹಂತದ ಯೋಜನೆ ಮೂಲಕ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಒಂದು ವರ್ಷದ ಅವಧಿಯಲ್ಲಿ ವಿಜಯಪುರ, ಶಿವಮೊಗ್ಗ ವಿಮಾನ ನಿಲ್ದಾಣ ಪೂರ್ಣಗೊಳಿಸಿ ವಿಮಾನ ಹಾರಾಟ ಮಾಡುವ ಕನಸು ನನಸುಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.