ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಮುಳವಾಡ ಏತ ನೀರಾವರಿ 3ನೇ ಹಂತ ವ್ಯಾಪ್ತಿಯ ತಿಡಗುಂದಿ ಶಾಖಾ ಕಾಲುವೆಯ 56-66 ಕಿ.ಮೀ.ವರೆಗಿನ ಕಾಮಗಾರಿ ಮೂಲಕ ರಾಜನಾಳ, ತಡವಲಗಾ ಹಾಗೂ ಹಂಜಗಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಕೊನೆಗೂ ಚಾಲನೆ ದೊರೆತಿದೆ.
ಲಿಂಬೆ, ದಾಳಿಂಬೆ, ದ್ರಾಕ್ಷಿ ಸೇರಿದಂತೆ ಹತ್ತು ಹಲವು ತೋಟಗಾರಿಕೆ ಬೆಳೆಗಳನ್ನು ನಂಬಿರುವ ಇಂಡಿ ತಾಲೂಕಿನಲ್ಲಿ ನೀರಾವರಿ ಸೌಲಭ್ಯಗಳಿಗಾಗಿ ದಶಕಗಳ ಕಾಲ ಹೋರಾಟ ನಡೆದಿದೆ. ಇಂದು ಬಹುನಿರೀಕ್ಷಿತ ರಾಜನಾಳ ಕೆರೆಗೆ ತಿಡಗುಂದಿ ಶಾಖಾ ಕಾಲುವೆಯಿಂದ ನೀರು ತುಂಬಿಸುವ ಯೋಜನೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಗುದ್ದಲಿ ಪೂಜೆ ನೆರವೇರಿಸಿದರು.
ಈ ಭಾಗದ ಬೆಳೆಗಳು ನೀರಿನ ಕೊರತೆಯಿಂದ ಪ್ರತಿ ವರ್ಷ ಒಣಗಿ ಹೋಗುತ್ತಿತ್ತು. ಕಳೆದ ವರ್ಷ ಪ್ರವಾಹ ಸಂದರ್ಭದಲ್ಲಿ ರಾಜನಾಳ ಕೆರೆಗೆ ಮಳೆ ನೀರು ಸಂಗ್ರಹವಾಗಿದೆ. ಈ ಮೂಲಕ ನೀರಾವರಿ ಸೌಲಭ್ಯ ದೊರೆತರೆ ಈ ಭಾಗದ ರೈತರ ಬದುಕು ಹಸನಾಗಲಿದೆ. ಹಾಗಾಗಿ ರಾಜನಾಳ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಯಿತು.
ರೈತರು ಹಲವು ವರ್ಷಗಳಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಆರಂಭಿಸಿ ಎನ್ನುವ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಪ್ರತಿ ವರ್ಷ ಮಳೆ ಇಲ್ಲ, ನೀರಾವರಿ ಯೋಜನೆಗಳು ಇಲ್ಲದ ಕಾರಣ ಲಿಂಬೆಗೆ ಟ್ಯಾಂಕರ್ ನೀರು ಬಳಕೆ ಮಾಡಲಾಗುತ್ತಿತ್ತು. ಈಗ ತಿಡಗುಂದಿ ಶಾಖಾ ಕಾಲುವೆಯಿಂದ ಇಂಡಿ ತಾಲೂಕಿನ 14,500 ಹೆಕ್ಟೇರ್ ಪ್ರದೇಶ ಹಾಗೂ 15 ಗ್ರಾಮಗಳು ಸಂಪೂರ್ಣ ನೀರಾವರಿಗೆ ಒಳಪಡಲಿವೆ. ರಾಜನಾಳ ಕೆರೆ ಬತ್ತಿ ಹೋಗಿತ್ತು. ಕಳೆದ ವರ್ಷದ ಮಳೆಯಿಂದ ಕೆರೆ ತುಂಬಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ.
ಓದಿ: ಉಪಚುನಾವಣೆ: ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸಿದ ಡಿಕೆಶಿ
ತಿಡಗುಂದಿ ಶಾಖಾ ಕಾಲುವೆಯಿಂದ ಅಥರ್ಗಾ, ರಾಜನಾಳ, ತಡವಲಗಾ, ಹಂಜಗಿ ಕೆರೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ 100 ಕೋಟಿ ರೂ. ವೆಚ್ಚದಲ್ಲಿ 60 ದಿನಗಳಲ್ಲಿ ತುಂಬಿಸಿ ಬೆಳೆದು ನಿಂತಿರುವ ಲಿಂಬೆ ಬೆಳೆಗೆ ನೀರು ಒದಗಿಸುವ ಕೆಲಸ ಸರ್ಕಾರ ಮಾಡಲಿದೆ. 18 ತಿಂಗಳ ಕಾಲಾವಧಿಯಲ್ಲಿ ಇಂಡಿ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವ ಆಲೋಚನೆ ಇದೆ.