ವಿಜಯಪುರ: ಮಹಿಳಾ ಶಕ್ತಿ ಕೇಂದ್ರದ ಸಿಬ್ಬಂದಿ ಕ್ರಿಯಾ ಯೋಜನೆ ಅನ್ವಯ, ಕೊರೊನಾ ನಿಯಂತ್ರಣ, ವಿವಿಧ ಮಹಿಳೆಯರು ಮತ್ತು ಮಕ್ಕಳ ಅನುಕೂಲದ ಚಟುವಟಿಕೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಮಹಿಳಾ ಶಕ್ತಿ ಕೇಂದ್ರದ 2020-21 ನೇ ಸಾಲಿನ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮುಂದಿನ ಮೂರು ತಿಂಗಳುಗಳ ಅವಧಿಗೆ ರೂಪಿಸಿರುವ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವ ಮಹಿಳಾ ಶಕ್ತಿ ಕೇಂದ್ರದ ಸಿಬ್ಬಂದಿಗೆ ಸೂಚನೆ ನೀಡಿದರು.
ಕ್ರಿಯಾ ಯೋಜನೆ ಅನ್ವಯ ಸಾಂಕ್ರಾಮಿಕ ರೋಗ, ಕೋವಿಡ್ ನಿಯಂತ್ರಣಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರೊಂದಿಗೆ ಮಹಿಳೆಯರಲ್ಲಿ ಜಾಗೃತಿ, ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ಮಹಿಳೆಯರಲ್ಲಿ ವಿವಿಧ ಸಾಲಸೌಲಭ್ಯ, ಸಣ್ಣ ಹಣಕಾಸು ಉದ್ದಿಮೆ, ಸಾಮಾಜಿಕ ಅನಿಷ್ಟ ಪದ್ಧತಿಗಳಾದ ಬಾಲ್ಯವಿವಾಹ ನಿರ್ಮೂಲನೆ ಸೇರಿದಂತೆ ಆರೋಗ್ಯ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವಂತೆ ಕಾರ್ಯಕರ್ತೆಯರಿಗೆ ಡಿಸಿ ಸಭೆಯಲ್ಲಿಸೂಚಿಸಿದರು.
ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಪೋಷಣ ಅಭಿಯಾನ ಅಂಗವಾಗಿ ನಡೆಯುವ ಲಸಿಕಾ ಕಾರ್ಯಕ್ರಮದ ಸಂದರ್ಭದಲ್ಲಿ ಕೋವಿಡ್ ಮುನ್ನೆಚ್ಚರಿಕೆ ಮತ್ತು ಮಗಳಿಗೆ ಶಿಕ್ಷಣ ನೀಡುವ ಮತ್ತು ರಕ್ಷಣೆ ಕುರಿತಂತೆ ಸೂಕ್ತ ಅರಿವು ಪಾಲಕರಲ್ಲಿ ಮೂಡಿಸಬೇಕು ಎಂದು ನಿರ್ದೇಶನಕೊಟ್ಟರು.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಜಿಲ್ಲಾ ಸಮನ್ವಯ ಮತ್ತು ಪರಿಶೀಲನಾ ಸಭೆ ನಡೆಸಿದ ಅವರು, 2019-20 ಹಾಗೂ 2020-21 ನೇ ಸಾಲಿನ ಪ್ರಕರಣ ದಾಖಲು ಇತ್ಯರ್ಥ ಸೇರಿದಂತೆ ಸೂಕ್ತ ಮಾಹಿತಿಗಳೊಂದಿಗೆ ವರದಿ ಸಿದ್ಧಪಡಿಸಿ ಮಂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿ ಹೇಳಿದರು.
ಇನ್ನು ಸ್ಥೈರ್ಯ ಯೋಜನೆಯಡಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಆರ್ಥಿಕ ಪರಿಹಾರ, ಮರಣ ಪರಿಹಾರ, ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರು, ಹೆಣ್ಣು ಮಕ್ಕಳಿಗೆ ಮರಣ ಪರಿಹಾರ ಸೇರಿದಂತೆ ಸೂಕ್ತ ಪರಿಹಾರಗಳ ಬಗ್ಗೆ ಜಿಲ್ಲಾ ಸಮನ್ವಯ ಮತ್ತು ಪರಿಶೀಲನಾ ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು. ಅದರಂತೆ ಸ್ಥೈರ್ಯ ನಿಧಿಯಡಿ ಪರಿಹಾರ ಧನ ನೀಡಿದ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪರಿಶೀಲಿಸಿದರು.
ಇನ್ನೂ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.