ವಿಜಯಪುರ: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಬಿಲ್ ಬಾಕಿ ವಿಚಾರವಾಗಿ ವ್ಯಕ್ತಿಯ ಬಟ್ಟೆ ಬಿಚ್ಚಿಸಿ ಅರೆಬೆತ್ತಲೆಗೊಳಿಸಿ ಕೆಲವು ದಿನಗಳಿಂದ ಕೂಡಿ ಹಾಕಿರುವ ಆರೋಪ ಕೇಳಿಬಂದಿದೆ.
ಹೌದು, ಡೀಸೆಲ್ ಬಾಕಿ ಹಣ ವಸೂಲಿ ಸಂಬಂಧ ವ್ಯಕ್ತಿಯನ್ನು ಅರೆಬೆತ್ತಲೆಗೊಳಿಸಿ ಬಂಕ್‌ನಲ್ಲಿ ಕೂಡಿ ಹಾಕಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಪೆಟ್ರೋಲ್ ಬಂಕ್ವೊಂದರಲ್ಲಿ ನಡೆದಿದೆ. 10 ರಿಂದ 15 ಲಕ್ಷ ರೂಪಾಯಿ ಡೀಸೆಲ್ ಬಾಕಿ ಉಳಿಸಿಕೊಂಡಿದ್ದ ಮೌನೇಶ ಪತ್ತಾರ ಎಂಬ ವ್ಯಕ್ತಿಯನ್ನು ಪೆಟ್ರೋಲ್ ಬಂಕ್ಮಾಲೀಕರು ಅರೆಬೆತ್ತಲೆಗೊಳಿಸಿ ಬಂಕ್‌ನಲ್ಲಿ ಕೂಡಿ ಹಾಕಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅಧಿಕಾರಿಗಳಿಂದ ಮೌನೇಶ್ ರಕ್ಷಣೆ : ಈ ಕುರಿತು ಮಾಹಿತಿ ಪಡೆದ ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಹಶೀಲ್ದಾರ್ ಟಿ. ರೇಖಾ ಮತ್ತು ಮುದ್ದೇಬಿಹಾಳ ಪಿಎಸ್‌ಐ ಆರೀಫ್ ಮುಶಾಪುರೆ ಪೆಟ್ರೋಲ್ ಅವರು ಬಂಕ್‌ಗೆ ಭೇಟಿ ನೀಡಿ ಅರೆಬೆತ್ತಲೆಗೊಳಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ವೇಳೆ ಅರೆಬೆತ್ತಲೆಯಾಗಿ ಅವಮಾನದಿಂದ ಕೂತಿದ್ದ ಮೌನೇಶ ಪತ್ತಾರ ಅವರನ್ನು ರಕ್ಷಿಸಿದ್ದಾರೆ.
ಪತಿಯ ರಕ್ಷಣೆಗೆ ಮೊರೆಯಿಟ್ಟಿದ್ದ ಪತ್ನಿ ರಂಗಮ್ಮ: ತನ್ನ ಪತಿಯನ್ನು ರಕ್ಷಣೆ ಮಾಡಬೇಕೆಂದು ಕೋರಿ ಮೌನೇಶ ಪತ್ತಾರ ಅವರ ಪತ್ನಿ ರಂಗಮ್ಮ ಪೊಲೀಸರಲ್ಲಿ ಮನವಿ ಮಾಡಿದ್ದರು. ಪೆಟ್ರೋಲ್ ಬಂಕ್‌ನಲ್ಲಿ ತಮಿಳುನಾಡಿನ ಶಿವಶಕ್ತಿ ಬೊರವೆಲ್ ವಾಹನಗಳಿಗೆ ಡೀಸೆಲ್ ಹಾಕಿಸುತ್ತಿದ್ದ ಮೌನೇಶ ಪತ್ತಾರ ಕಳೆದ ನಾಲ್ಕು ವರ್ಷದಿಂದ ಹಣವನ್ನೇ ನೀಡಿರಲಿಲ್ಲ. ಅದರಲ್ಲಿ ಮುಖ್ಯವಾಗಿ ಶಿವಶಕ್ತಿ ಬೋರವೆಲ್‌ನವರು ಮೌನೇಶ ಪತ್ತಾರಗೆ ಹಣ ಕೊಟ್ಟಿರಲಿಲ್ಲವಂತೆ. ಕಳೆದ 12ದಿನಗಳಿಂದ ಬಂಕ್‌ನಲ್ಲಿ ಮೌನೇಶ ಪತ್ತಾರ ಅವರನ್ನು ಅರೆಬೆತ್ತಲೆ ಮಾಡಿ ಕೂಡಿ ಹಾಕಿದ್ದಾರೆ ಪತ್ನಿ ರಂಗಮ್ಮ ಹೇಳಿದ್ದಾರೆ. ಈ ಬಗ್ಗೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೂಕ್ತ ತನಿಖೆಗೆಗೆ ಸೂಚನೆ: ಘಟನೆ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ಅವರು ಡಿಸಿ ಮಹಾಂತೇಶ ದಾನಮ್ಮವರ ಹಾಗೂ ಎಸ್ಪಿ ಆನಂದಕುಮಾರ್ಗೆ ಸೂಚನೆ ನೀಡಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: Bengaluru crime: ಮಾತನಾಡುವ ವಿಚಾರಕ್ಕೆ ಸ್ನೇಹಿತನ ಮೇಲೆ ಹಲ್ಲೆ ಅರೋಪ.. ಉದ್ಯಮಿಯ ಪುತ್ರ ಪೊಲೀಸರ ವಶಕ್ಕೆ