ವಿಜಯಪುರ: ಕೊರೊನಾ 3ನೇ ಅಲೆ ಆರಂಭವಾಗಿ 20 ದಿನಗಳಲ್ಲಿ 249ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಧೃಢಪಟ್ಟ ಹಿನ್ನಲೆ ಮಕ್ಕಳ ಸುರಕ್ಷತೆ ಹಾಗೂ ಉತ್ತಮ ಚಿಕಿತ್ಸೆ ನೀಡಲು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿ 50 ಹಾಸಿಗೆಯ ವಿಶೇಷ ಕೋಣೆ ತಯಾರಿಸಿದೆ. ಅಗತ್ಯ ಬಿದ್ದ ಮಕ್ಕಳಿಗೆ ಚಿಕಿತ್ಸೆ ನೀಡಲು ವಿಶೇಷವಾಗಿ ಈ ಕೋಣೆ ನಿರ್ಮಾಣಗೊಂಡಿದೆ.
50 ಹಾಸಿಗೆ ಈ ಕೋಣೆಯಲ್ಲಿ 10 ಐಸಿಯು, 6 ವೆಂಟಿಲೇಟರ್ ಹಾಗು 6 ಹಾಸಿಗೆಗಳನ್ನು ನವಜಾತ ಶಿಶುಗಳ ಚಿಕಿತ್ಸೆಗೆ ಮೀಸಲಿರಿಸಿದೆ. ಉಳಿದ ಹಾಸಿಗೆಗಳು ಸಹ ಐಸಿಯು ಸೌಲಭ್ಯಗಳನ್ನು ಹೊಂದಿವೆ.
ಒಂದನೇ ಅಲೆಯಲ್ಲಿ ಆಗಲಿ, 2ನೇ ಅಲೆಯಲ್ಲಿ ಆಗಲಿ ಮಕ್ಕಳ ಮೇಲೆ ಕೋವಿಡ್ ಅಷ್ಟು ಪರಿಣಾಮ ಬೀರಿರಲಿಲ್ಲ. ಆದರೆ, ಮೂರನೇ ಅಲೆಯಲ್ಲಿ ಹೆಚ್ಚು ಸೋಂಕು ಕಾಣಿಸುತ್ತಿದೆ. ಹೀಗಾಗಿ, ಮಕ್ಕಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಗೋಡೆ ಮೇಲೆ ಕಾರ್ಟೂನ್: ಕೋವಿಡ್ ಸೋಂಕಿನಿಂದ ದಾಖಲಾಗುವ ಮಕ್ಕಳಿಗೆ ಮನೆ ಹಾಗೂ ಕಾನ್ವೆಂಟ್ ಶಾಲೆಯ ರೀತಿ ಅನುಭವವಿರಲಿ ಎಂದು 50ರ ಹಾಸಿಗೆಯ ವಿಶೇಷ ಕೋಣೆಯಲ್ಲಿ ಕಾರ್ಟೂನ್ ಅಂಟಿಸಲಾಗಿದೆ. ಪ್ಯಾಂಟಮ್ ಸ್ಪೇಡರ್ ಮ್ಯಾನ್, ವಿವಿಧ ಪ್ರಾಣಿ- ಪಕ್ಷಿಗಳು, ಗಣಿತ ಲೆಕ್ಕಗಳ ಕಾರ್ಟೂನ್ಗಳನ್ನು ನಿರ್ಮಿಸಲಾಗಿದೆ.
ಗರ್ಭಿಣಿಯರ ಚಿಕಿತ್ಸೆ ಪ್ರತ್ಯೇಕ ಆಪರೇಷನ್ ಥಿಯೇಟರ್: ಇದರ ಜತೆಗೆ ಹೆರಿಗೆಗಾಗಿ ದಾಖಲಾಗುವ ಗರ್ಭಿಣಿಯರಿಗೆ 100 ಹಾಸಿಗೆಯ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅವರು ದಾಖಲಾದ ಮೇಲೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ನಡೆಸಲಾಗುತ್ತಿದೆ. ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯರ ಶಸ್ತ್ರಚಿಕಿತ್ಸೆಗೂ ಸಹ ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಲಾಗಿದೆ. 3ನೇ ಅಲೆ ನಂತರ ಒಟ್ಟು 6 ಗರ್ಭೀಣಿಯರು ಈ ವಿಶೇಷ ಕೋಣೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಐವರ ಹೆರಿಗೆ ಸಹ ಆಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.
ಆಕ್ಸಿಜನ್ ಕೊರತೆ ಇಲ್ಲ: 2ನೇ ಅಲೆಯಲ್ಲಿ ರಾಜ್ಯದಲ್ಲಿ ಸಾಕಷ್ಟು ಕೋವಿಡ್ ಸೋಂಕಿತರು ಆಕ್ಸಿಜನ್ ಸಿಗದ ಕಾರಣ ಪ್ರಾಣ ಬಿಟ್ಟಿದ್ದರು. ಈ ಬಾರಿ ಆ ರೀತಿ ಆಗದಂತೆ ಜಿಲ್ಲಾಸ್ಪತ್ರೆ ಮುಂಜಾಗೃತ ಕ್ರಮ ಕೈಗೊಂಡಿದೆ. 1000ಎಲ್ಪಿಎಸ್, 61 ಕೆಎಲ್ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ಎಂದರು.
20 ಸೋಂಕಿತರು ದಾಖಲು: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಸದ್ಯ ಆಸ್ಪತ್ರೆ ವಿಶೇಷ ಘಟಕದಲ್ಲಿ 20 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಇಬ್ಬರು ಐಸಿಯುನಲ್ಲಿ ಇದ್ದಾರೆ. ಉಳಿದವರು ಸಾಮಾನ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಕ್ಕಳಿಗೂ ಅದೇ ಡೋಸ್ : ಸಾಮಾನ್ಯ ಸೋಂಕಿತರಿಗೆ ನೀಡುವ ಚಿಕಿತ್ಸೆಯನ್ನೇ ಮಕ್ಕಳಿಗೂ ನೀಡಲಾಗುತ್ತಿದೆ. ಡೋಸ್ ನೀಡುವಾಗ ಮಾತ್ರ ಮಕ್ಕಳ ದೇಹದ ತೂಕಕ್ಕೆ ಅನುಸಾರವಾಗಿ ಡೋಸ್ ಪ್ರಮಾಣ ಕಡಿಮೆಯಾಗಿರುತ್ತದೆ. ಔಷಧಿ ಸಹ ಎಲ್ಲ ಸೋಂಕಿತರಿಗೂ ನೀಡಲಾಗುತ್ತದೆ ಎಂದು ತಿಳಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ