ವಿಜಯಪುರ: ನಗರದ ಹೊರವಲಯದ ಜುಮನಾಳ ಬಳಿ ವಿಜಯಪುರ ಜಂಟಿ ಸಮಿತಿ ಆಯೋಜಿಸಿದ್ದ ಸಂವಿಧಾನ ಉಳಿಸಿ ಆಂದೋಲನದಲ್ಲಿ ವಿವಿಧ ರಾಜಕೀಯ ನಾಯಕರು, ಧಾರ್ಮಿಕ ಮುಂಖಂಡರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಮಾಜಿ ಸಚಿವರಾದ ಎಂ.ಬಿ. ಪಾಟೀಲ, ಯು.ಟಿ. ಖಾದರ್ ಸೇರಿದಂತೆ ಹಲವು ನಾಯಕರು ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ಕಾಯ್ದೆ ದೇಶಕ್ಕೆ ಮಾರಕವಾಗಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಬೇಕಿದೆ ಎಂದು ಕೇಂದ್ರ ಮಾಜಿ ಸಚಿವ ಯಶವಂತ ಸಿನ್ಹಾ ಹೇಳಿದರು.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಬಡವರಿಂದ ಮತದಾನದ ಹಕ್ಕು ಕಸಿದುಕೊಳ್ಳುವುದೇ ಪೌರತ್ವ ಕಾಯ್ದೆ ಉದ್ದೇಶ ಆಗಿದೆ ಎಂದು ಆರೋಪಿಸಿದರು.
ಇದೇ ವೇಳೆ ಭಾರತಕ್ಕೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೂನಾಲ್ಡ್ ಟ್ರಂಪ್ ಅವರನ್ನು ಕಟುವಾಗಿ ಟೀಕಿಸಿ, ಮೋದಿ ಸರ್ಕಾರ ಹಿಂದಿನ ಸರ್ಕಾರ ಮಾಡಿದ ಸಾಧನೆಯನ್ನು ತೋರಿಸಿದ್ದಾರೆ. ಹೊರತು ತಾವು ಏನು ಮಾಡಿಲ್ಲ. ತಮ್ಮನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.