ವಿಜಯಪುರ: ನಮ್ಮ ಇತಿಹಾಸ, ಸಂಸ್ಕೃತಿ ವಿಚಾರವಾಗಿ ನಮಗೆ ಹೆಮ್ಮೆಯಿದೆ. ಇಡೀ ದೇಶದ ಜನರಲ್ಲಿ ತಮ್ಮ ಸಂಸ್ಕೃತಿ ಕುರಿತು ಗರ್ವವಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಅವರ ಹಿಂದೂ ಪದ ಕುರಿತ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಪಕ್ಷದ ಮುಖಂಡರು ಪದೇ ಪದೆ ಹಿಂದುತ್ವದ ಬಗ್ಗೆ ಅವಮಾನ ಮಾಡುತ್ತಾರೆ. ಅದು ಪದೇ ಪದೆ ಬೇಕು ಅಂತಲೇ ಅವಮಾನ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಅವರು ಇಲ್ಲಿಗೆ ಬಂದು ಹೋದ ಮೇಲೆ ಎಂತಹ ವಿಚಾರಗಳನ್ನು ಹೇಳಿ ಹೋದರು. ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಕೂಡಾ ಜೊತೆಗಿದ್ದರು ಎಂದರು. ಕಾಂಗ್ರೆಸ್ನ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಹೀಗೆ ಅವಮಾನ ಮಾಡುವುದು ಸರಿಯಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷ ದೇಶದಲ್ಲಿ ಮುಗಿದು ಹೋಗುತ್ತಿದೆ ಎಂದು ವ್ಯಂಗ್ಯವಾಡಿದರು. ವಿನಾಶ ಕಾಲೇ ವಿಪರೀತ ಬುದ್ದಿ ಎಂಬಂತೆ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ ಉದಾಹರಣೆ ಎಂದು ಅರುಣ್ ಸಿಂಗ್ ಹೇಳಿದರು.
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ನಾಯಕರು ಹೀನಾಯವಾಗಿ ಸೋಲುಂಡು ಬಿಜೆಪಿ ನಾಯಕರು ಪ್ರಚಂಡ ಬಹುಮತದಿಂದ ಗೆಲ್ಲುವರು. ರಾಹುಲ್ ಗಾಂಧಿ ಹಿಂದೂ, ಹಿಂದುತ್ವ, ಹಿಂದುವಾದಿ ಹೀಗೆ ಬೇರೆ ಬೇರೆ ವಾಕ್ಯಗಳನ್ನು ತೆಗೆದುಕೊಂಡು ಬರುತ್ತಾರೆ. ನಮ್ಮ ಅಧ್ಯಾತ್ಮ, ಸಂಸ್ಕೃತಿ ಕುರಿತು ಮೊದಲು ಅಧ್ಯಯನ ಮಾಡಲಿ, ವಿಕಿಪೀಡಿಯಾ, ವಾಟ್ಸ್ಆ್ಯ ಪ್, ಗೂಗಲ್ ನೋಡುವುದು ಬಿಡಿ ಎಂದರು.
ಸತೀಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ನ ಎಲ್ಲ ನಾಯಕರು ವೇದ, ಪುರಾಣ, ಗ್ರಂಥವನ್ನು ಅಧ್ಯಯನ ಮಾಡಿ, ಬಸವಣ್ಣ ಅವರ ವಚನಗಳನ್ನು ಅಧ್ಯಯನ ಮಾಡಲಿ, ಈ ತರಹ ಮಾತನಾಡುವುದರಿಂದ ಇಡೀ ಸಮಾಜಕ್ಕೆ ಕಷ್ಟವಾಗುತ್ತದೆ ಎಂದು ಹೇಳಿದರು.
ಈಗಾಗಲೇ ಸಿಂದಗಿ ಬೈ ಎಲೆಕ್ಷನ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯ ಎಲ್ಲ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ರಮೇಶ್ ಜಿಗಜಿಣಗಿ ಹೇಳಿಕೆ ಸರಿಯಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದೂ ಪದ ಭಾರತದ್ದು ಅಲ್ಲ ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಂಸದ ರಮೇಶ ಜಿಗಜಿಣಗಿ, ಈ ರೀತಿ ನೀಡಿರುವ ಹೇಳಿಕೆ ಸರಿಯಲ್ಲ, ಇದು ತಪ್ಪು ಎಂದರು. ಜಿಲ್ಲೆಯ ಇಂಡಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಂಕಲ್ಪಸಭೆಗೆ ಮುನ್ನ ಮಾತನಾಡಿದ ಅವರು, ಈ ರೀತಿ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ. ಯಾರೇ ಹಿಂದೂ ಪದದ ಬಗ್ಗೆ ಅಪಸ್ವರ ತೆಗೆದರೆ ಅದು ತಪ್ಪು ಎಂದು ಹೇಳಿದರು.
ಇನ್ನೂ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅತಂತ್ರವಾಗಿಲ್ಲ. ಒಟ್ಟು 17 ಸ್ಥಾನಗಳಿಸಿದ್ದು, ಈಗ ಅದರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಪಾಲಿಕೆ ಚುನಾವಣೆ ಗದ್ದುಗೆ ನಾನೇ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಗ್ಗಟ್ಟಿನ ಮಂತ್ರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಲಿ, ಎಲ್ಲ ನಾಯಕರು ಒಗ್ಗಟ್ಟಿನಿಂದ ಅವರನ್ನು ಗೆಲ್ಲಿಸಿಕೊಡುವುದಾಗಿ ಹೇಳಿದರು. ಪಕ್ಷದಲ್ಲಿ ಯಾವುದೇ ಒಡಕು ಇಲ್ಲ, ಎಲ್ಲರೂ ಸೇರಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.
ಓದಿ: ಜಾರಕಿಹೊಳಿ ಹಿಂದೂ ಪದ ಬಳಕೆ ವೈಯಕ್ತಿಕ ವಿಚಾರ, ಕಾಂಗ್ರೆಸ್ಗೆ ಸಂಬಂಧಿಸಿದ್ದಲ್ಲ: ಡಿಕೆಶಿ