ವಿಜಯಪುರ: ಸಿಂದಗಿ ಉಪಚುನಾವಣೆಯ ಮತದಾನ ಹತ್ತಿರವಾಗುತ್ತಿದ್ದಂತೆ ಚುನಾವಣಾ ಪ್ರಚಾರ ತಾರಕಕ್ಕೇರಿದೆ. 'ಪ್ರಜಾಪ್ರಭುತ್ವದ ಉಳಿವಿಗಾಗಿ ಮತ' ದಲಿತ ಮುಖಂಡರ ಸಮಾರಂಭ ನಡೆಸುವ ಮೂಲಕ ಕಾಂಗ್ರೆಸ್ ದಲಿತರ ಮತ ಸೆಳೆಯಲು ಮುಂದಾಗಿದೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಸಾಧನೆಯನ್ನು ಕೊಂಡಾಡಿರುವ 'ಕೈ' ನಾಯಕರು ಆರ್ಎಸ್ಎಸ್ ಹಾಗೂ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿಂದಗಿಯಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಮತ ಎಂಬ ಕಾರ್ಯಕ್ರಮವನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯಸಭಾ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಂ.ಬಿ. ಪಾಟೀಲ, ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಮೋದಿ ಆರ್ಎಸ್ಎಸ್ ಕೈಗೊಂಬೆ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಡಾ. ಅಂಬೇಡ್ಕರ್ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ್ದಾರೆ ಎನ್ನುವ ಕಾರಣಕ್ಕೆ ಮೋದಿ ಪ್ರಧಾನಿಯಾಗಿದ್ದಾರೆ. ದೇಶವನ್ನು ಆರ್ಎಸ್ಎಸ್ ನಡೆಸುತ್ತಿದೆ. ಪ್ರಧಾನಿ ಮೋದಿ ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕೀಲಿ ಕೊಟ್ಟರೆ ಮಾತ್ರ ಮೋದಿ ಕೆಲಸ ಮಾಡ್ತಾರೆ. ದೇಶದಲ್ಲಿ ಜಾತಿ-ಜಾತಿಗಳನ್ನು ಒಡೆದು ಇಬ್ಭಾಗ ಮಾಡಲು ಆರ್ ಎಸ್ ಎಸ್ ಹೊರಟಿದೆ ಎಂದು ಆರೋಪಿಸಿದರು.
ಸಮಾಜ ಇಬ್ಭಾಗ ಆರ್ಎಸ್ಎಸ್ ಉದ್ದೇಶ: ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಆರ್ಎಸ್ಎಸ್ ಒಂದು ಮನುವಾದಿ ಸಂಘಟನೆಯಾಗಿದೆ. ಸಂಘಟನೆಯ ಮುಖವಾಡ ಹಾಕಿಕೊಂಡು ಸಮಾಜವನ್ನು ಇಬ್ಭಾಗ ಮಾಡುವ ಉದ್ದೇಶ ಅವರದ್ದಾಗಿದೆ. ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆ ಹೋಗಲಾಡಿಸಿ ಎಲ್ಲರೂ ಸಮಾನರು ಎನ್ನುವ ಆಸೆ ಹೊಂದಿದ್ದರು. ಅವರಂತ ಶ್ರೇಷ್ಠ ಸಂವಿಧಾನ ರಚನೆಕಾರ ಮತ್ತೊಮ್ಮೆ ದೇಶದಲ್ಲಿ ಹುಟ್ಟಲಾರ ಎಂದರು.
ಕಾಂಗ್ರೆಸ್-ಬಿಜೆಪಿ ಒಂದು ಕಡೆ ಸಿಂದಗಿ ಚುನಾವಣೆಯಲ್ಲಿ ಮಾತು, ಟ್ವೀಟ್ ವಾರ್ ಮೂಲಕ ಮತದಾರರನ್ನು ಸೆಳೆಯಲು ಸರ್ವಪ್ರಯತ್ನ ನಡೆಸುತ್ತಿದೆ. ಇತ್ತ ಜೆಡಿಎಸ್ ಸಹ ತನ್ನ ಅಭ್ಯರ್ಥಿ ಗೆಲುವಿಗಾಗಿ ದೊಡ್ಡಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದು, ಮತ ಬೇಟೆ ನಡೆಸಿದ್ದಾರೆ.