ವಿಜಯಪುರ: ಜಿಲ್ಲೆಯಲ್ಲಿ ಅಲಿಯಾಬಾದ್ ಹಂತ-1 ಹಾಗೂ ಹಂತ-2ರ ಕೈಗಾರಿಕಾ ಪ್ರದೇಶದಲ್ಲಿನ ಮೂಲ ಕಾಮಗಾರಿಗಳು ಶೇ. 85 ರಷ್ಟಾಗಿದ್ದು ಉಳಿದ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸುಂತೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವಿಜಯಪುರ ಜಿಲ್ಲೆ ಬ.ಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದಲ್ಲಿ ಸುಮಾರು 564 ಜಮೀನಿನಲ್ಲಿ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಗಳು 90 ರಷ್ಟು ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿಗಳು ತಿಂಗಳ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.
ಮುಳವಾಡ ಗ್ರಾಮದ ಮೊದಲ ಹಂತದ ಕಾಮಗಾರಿಗೆ ಸಂಬಂಧಿಸಿದಂತೆ ಸಿವಿಲ್ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಶೀಘ್ರವಾಗಿ ವಿದ್ಯುತ್ ಸೌಲಭ್ಯ ಕಲ್ಪಿಸಲು ಅನುಕೂಲವಾಗುವಂತೆ ವಿದ್ಯುತ್ ಇಲಾಖೆಯ ಸಂಬಂಧಪಟ್ಟ ಅಭಿಯಂತರರು ನವೆಂಬರ್ ಅಂತ್ಯದಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಬೇಕು ಹಾಗೂ ಜನವರಿ ತಿಂಗಳಲ್ಲಿ ವಿದ್ಯುತ್‍ಗೆ ಸಂಬಂಧಿಸಿದಂತೆ ಕಾಮಗಾರಿಗಳನ್ನು ಪ್ರಾರಂಭಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ವಿವಿಧ ಕೈಗಾರಿಕೋದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಸಿಂದಗಿ ತಾಲೂಕು ಸಣ್ಣ ಕೈಗಾರಿಕಾ ಉದ್ಯಮಿದಾರರು ಹಾಗೂ ಸೇವಾ ಸಂಸ್ಥೆಗಳ ವತಿಯಿಂದ ಕೋರಲಾದ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಂಡಿದ್ದು, ಸಿಂದಗಿ ಕೈಗಾರಿಕಾ ವಸಾಹತುವಿನಲ್ಲಿ 458.20 ಚ.ಮಿ ಜಾಗವನ್ನು ನಿಗಮದ ನಿಯಮಾವಳಿಯಂತೆ ಹಂಚಿಕೆ ಪತ್ರಗಳನ್ನು ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಸೌತ್ ಇಂಡಿಯಾ ವೇರ್ ಹೌಸ್ ಕಾರ್ಪೋರೇಷನ್, ಪ್ಲಾಟ್ ನಂ2, ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶ. ಅಲಿಯಾಬಾದ್ ಬ್ಲಾಕ್-2 ರಸ್ತೆ ಬದಿ ಅನಧಿಕೃತ ಅಂಗಡಿಗಳು ಗ್ರಾಮೀಣ, ಪಿಡಬ್ಲ್ಯುಡಿ ಪಾಲಿಕೆ ಸಮನ್ವಯತೆಯಿಂದ ಎಲ್ಲ ಅಧಿಕಾರಿಗಳು ಜಂಟಿಯಾಗಿ ಅಲ್ಲಿನ ಅಂಗಡಿಗಳನ್ನು 10 ದಿನಗೊಳಗಾಗಿ ತೆರವುಗೊಳಿಸುವಂತೆ ಸೂಚಿಸಿದರು. ಬ.ಬಾಗೇವಾಡಿ ತಾಲೂಕಿನ ಮುಳವಾಡ ಹಂತ-1ರಲ್ಲಿ ಕೈಗಾರಿಕಾ ಪ್ರದೇಶದ ಮೂಲ ಸೌಕರ್ಯಗಳ ಕಾಮಗಾರಿಗಳನ್ನು ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಂಡ ನಂತರ ನಿವೇಶನ ಹಂಚಿಕೆಯ ಅರ್ಜಿಯನ್ನು ಸರ್ಕಾರದ ನಿರ್ದೇಶನ ಹಾಗೂ ಮಾರ್ಗ ಸೂಚಿಯಂತೆ ಹಂಚಿಕೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಿಂದಗಿ ತಾಲೂಕಿನ ಸಣ್ಣ ಕೈಗಾರಿಕಾ ಉದ್ಯಮದಾರರ ನಿವೇಶನ ಅಳತೆಗಳನ್ನು ಸರಿಪಡಿಸಿ ನಿವೇಶನಗಳ ಸರಹದ್ದನ್ನು ಹೊಸದಾಗಿ ಸರ್ವೇ ಮಾಡಿಸಬೇಕು ಹಾಗೂ ಅಲ್ಲಿನ ನೀರಿನ ಸೌಲಭ್ಯಗಳಿಗಾಗಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಮತ್ತು ವಿದ್ಯುತ್ ಸಮಸ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ಬಗೆಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಮಲಘಾಣ ಗ್ರಾಮದಲ್ಲಿ ಬೆಲ್ಲ ತಯಾರಿಕಾ ಘಟಕ ಸ್ಥಾಪನೆಗೆ ಹಾಗೂ 12 ಜನರಿಗೆ ಉದ್ಯೋಗಾವಕಾಶ ನೀಡಲು ಮಹಾಲಕ್ಷ್ಮಿ ಜಾಗೇರಿ ಗೆ 1 ಎಕರೆ ಪ್ರದೇಶವನ್ನು ಕೈಗಾರಿಕಾ ಉದ್ದೇಶಕ್ಕೆ, ಹೆಸ್ಕಾಂದಿಂದ 30 ಕೆ.ವಿ.ಎ ವಿದ್ಯುತ್ ಮಂಜೂರಾತಿಗೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಇಂದು ಸಭೆಯಲ್ಲಿ ಅನುಮತಿ ನೀಡಲಾಯಿತು.