ವಿಜಯಪುರ: ಮಹಾರಾಷ್ಟ ರಾಜ್ಯದೊಂದಿಗೆ ಸಮನ್ವಯ ಸಾಧಿಸಿ ರಾಜ್ಯದ ನದಿ ಪಾತ್ರದಲ್ಲಿ ಪ್ರವಾಹವನ್ನು ಸೂಕ್ತವಾಗಿ ನಿಯಂತ್ರಿಸಲು ನೀರಾವರಿ ಹಾಗೂ ಕಂದಾಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಆಲಮಟ್ಟಿ ಕೃಷ್ಣಾ ಭಾಗ್ಯ ಜಲನಿಗಮ ವ್ಯವಸ್ಥಾಪಕ ನಿರ್ದೇಶಕರ ಆಡಳಿತ ಕಚೇರಿ ಸಭಾಂಗಣದಲ್ಲಿ ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಸಚಿವರು, ಶಾಸಕರು, ಜನಪ್ರತಿ ನಿಧಿಗಳು, ನೀರಾವರಿ ಇಲಾಖೆ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಮಳೆ ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತು ಸಭೆ ನಡೆಸಿದ ಅವರು ಅತಿವೃಷ್ಟಿ ಮತ್ತು ಪ್ರವಾಹದಿಂದ ಆಗುತ್ತಿರುವ ಹಾನಿಯನ್ನು ಮನಗಂಡು ಮಹಾರಾಷ್ಟ್ರ ರಾಜ್ಯದೊಂದಿಗೆ ಸಮನ್ವಯ ಸಾಧಿಸಿ ಜಲಾಶಯಗಳ ನೀರಿನ ನಿರ್ವಹಣೆಯನ್ನು ಅತ್ಯುತ್ತಮವಾಗಿ ನಿರ್ವಹಿಸುವ ಮೂಲಕ ಪ್ರವಾಹ ಪರಿಸ್ಥಿತಿ ತಗ್ಗಿಸಲು ಕೈಗೊಂಡ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಬಿಡುಗಡೆಯಾಗುವ ಅನುದಾನ ಮತ್ತು ರಾಜ್ಯ ಸರ್ಕಾರದ ಹಣಕಾಸಿನ ಇತಿಮಿತಿ ಆಧಾರದ ಮೇಲೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಇತ್ತೀಚೆಗೆ ಉಂಟಾದ ಮಳೆ ಮತ್ತು ಪ್ರವಾಹದಿಂದ ತೊಂದರೆಗೆ ಒಳಗಾಗಿದ್ದ ಜನರಿಗೆ ಎನ್‌ಡಿಆರ್‌ಎಫ್ ಸಹಕಾರ ಹಾಗೂ ಎಸ್‌ಡಿಆರ್‌ಎಫ್ ಅಡಿಯಲ್ಲಿ ಹೆಚ್ಚಿನ ನೆರವನ್ನು ಕೇಂದ್ರ ಸರ್ಕಾರ ಒದಗಿಸಿರುವುದಕ್ಕೆ ವಿಶೇಷವಾಗಿ ಪ್ರಧಾನ ಮಂತ್ರಿಗಳನ್ನು ಅಭಿನಂದಿಸಿದ ಅವರು ಕೋವಿಡ್ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸಚಿವರು ಮತ್ತು ಶಾಸಕರು ಕೋರಿರುವಂತೆ ಅಭಿವೃದ್ಧಿಯಿಂದ ಹಾನಿಗೊಳಗಾದ ಲೋಕೋಪಯೋಗಿ ರಸ್ತೆಗಳು, ಬೆಳೆ ಹಾನಿ, ಮನೆ ಹಾನಿ ಪರಿಹಾರಕ್ಕೆ ಗಮನ ನೀಡಲಾಗುವುದು.
ಪದೇ ಪದೇ ಪ್ರವಾಹದಿಂದ ಬಾಧಿತವಾಗುವ ಗ್ರಾಮಗಳ ಸ್ಥಳಾಂತರಕ್ಕೆ ಆಯಾ ಗ್ರಾಮಗಳ ಜನರ ಅಭಿಪ್ರಾಯ ಆಧಾರದ ಮೇಲೆ ಸ್ಥಳಾಂತರಕ್ಕೆ ಗಮನ ನೀಡಲಾಗುವುದು. ಸರ್ಕಾರದ ಹಣ ದುರುಪಯೋಗ ಆಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ತಿಳಿಸಿದ ಅವರು ಹೆಚ್ಚಿನ ಹಣಕಾಸಿನ ನೆರವು ಒದಗಿಸಲಾಗುವುದೆಂದು ತಿಳಿಸಿದರು.
ಪ್ರಸ್ತುತ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಜುಲೈ 21 ರಿಂದ 8 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಅಂದಾಜು 104 ಕೆರೆಗಳನ್ನು ತುಂಬಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದರು.
ಆಲಮಟ್ಟಿ ಜಲಾಶಯವು ರಾಜ್ಯದ ಪ್ರತಿಷ್ಠಿತ ಜಲಾಶಯವಾಗಿದ್ದು, 2002 ರಿಂದ ಅದರಲ್ಲಿ ನೀರು ಸಂಗ್ರಹಣೆ ಮಾಡಿ ಉತ್ತರ ಕರ್ನಾಟಕದ ಸುಮಾರು 8 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ಈ ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 123.08 ಟಿಎಂಸಿ ಇದ್ದು, ಇಂದು ಸಂಪೂರ್ಣ ಭರ್ತಿಯಾಗಿರುತ್ತದೆ. ಇದಕ್ಕಾಗಿ ಸಂತೋಷವಾಗುತ್ತಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಇತ್ತೀಚಿಗಿನ ಮಳೆ ಮತ್ತು ಪ್ರವಾಹದಿಂದ 850 ಕೋಟಿ ರೂ.ಗಳ ಮೂಲ ಸೌಕರ್ಯಗಳಿಗೆ ಹಾನಿ ಉಂಟಾಗಿದ್ದು, ರಸ್ತೆ ಸುಧಾರಣೆಗೆ, ಬೆಳೆ ಪರಿಹಾರಕ್ಕೆ ವಿಶೇಷ ಅನುದಾನ ಒದಗಿಸಬೇಕು. ಕಣಕುಂಬಿಯಿಂದ ಕೂಡಲಸಂಗಮದವರೆಗೆ ಇರುವ ಮಲಪ್ರಭಾ ನದಿ ಒತ್ತುವರಿ ಮತ್ತು ಸ್ವಚ್ಛತೆಗೆ ಪ್ರಾದೇಶಿಕ ಆಯುಕ್ತರು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ನೀರಾವರಿ ಇಲಾಖೆಗಳನ್ನೊಳಗೊಂಡ ಅಧಿಕಾರಿಗಳ ಸಮಿತಿ ರಚಿಸುವಂತೆ ಮನವಿ ಮಾಡಿ, ಪಟ್ಟದಕಲ್ಲು, ಐಹೊಳೆ ಸ್ಥಳಾಂತರಕ್ಕಾಗಿ ಭೂಸ್ವಾಧೀನ ಬಾಗಲಕೋಟೆ ಕುಡಚಿ ರೈಲ್ವೆ ಲೇನ್‌ಗಾಗಿ ಭೂಸ್ವಾಧೀನ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.
ಸಚಿವ ಬಿ.ಸಿ ಪಾಟೀಲ ಅವರು ನದಿ ಒತ್ತುವರಿ ತೆರವಿನಿಂದ ಪ್ರವಾಹ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು. ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ ಅವರು ಅತಿವೃಷ್ಟಿ ಮತ್ತು ನೆರೆಪೀಡಿತ ಪ್ರದೇಶಗಳ ನಿಖರ ಬೆಳೆ ಹಾನಿ ಸಮೀಕ್ಷೆ ಮತ್ತು ಪರಿಹಾರ ದೊರಕಿಸಲು ಮನವಿ ಮಾಡಿದರು. ಶಾಸಕರಾದ ಯಶವಂತರಾಯಗೌಡ ಪಾಟೀಲ ಮತ್ತು ಶಿವಾನಂದ ಪಾಟೀಲ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು. ಪ್ರವಾಹ ಪೀಡಿತ ಪ್ರದೇಶಗಳ ಜನರ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಪ್ರವಾಹದಿಂದ ಬಾಧಿತವಾಗಿರುವ ಗ್ರಾಮಗಳ ಸ್ಥಳಾಂತರ, ಭೂಸ್ವಾಧೀನ ಸಮಸ್ಯೆ ಪರಿಹರಿಸಲು ಹಾಗೂ ಮೂಲಸೌಕರ್ಯಕ್ಕೆ ವಿಶೇಷ ಅನುದಾನ ಒದಗಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಗೃಹ ಸಚಿವ ಎಸ್.ಆರ್ ಬೊಮ್ಮಾಯಿ, ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಕಂದಾಯ ಸಚಿವ ಆರ್.ಅಶೋಕ, ಆಹಾರ ಪೂರೈಕೆ ನಿಗಮದ ಅಧ್ಯಕ್ಷ ಎ.ಎಸ್ ಪಾಟೀಲ (ನಡಹಳ್ಳಿ), ಶಾಸಕರಾದ ರಾಜುಗೌಡ, ಚರಂತಿಮಠ, ವಿಧಾನ ಪರಿಷತ್ ಸದಸ್ಯ ಸುನೀಲ್‌ಗೌಡ ಪಾಟೀಲ ಸೇರಿದಂತೆ ಮೂರು ಜಿಲ್ಲೆಗಳ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.