ವಿಜಯಪುರ: ಉತ್ತರ ಕರ್ನಾಟಕದ ಹೆಮ್ಮೆಯ ಕೃಷ್ಣಾ ನದಿಯ ನೀರನ್ನು ಪ್ರತಿಯೊಬ್ಬ ರೈತರ ಹೊಲಗಳಿಗೆ ಹರಿಸಲು ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಕಾಮಗಾರಿಗೆ ಹಣ ಮೀಸಲಿಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೃಷ್ಣೆಯ ಮೇಲೆ ಆಣೆ ಮಾಡಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಪ್ರತಿ ವರ್ಷ ಯೋಜನೆಗೆ 10 ಸಾವಿರ ಕೋಟಿ ಮೀಸಲಿಡುವುದಾಗಿ ಹೇಳಿ ಮಾತು ತಪ್ಪಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ 1650,ಕೋಟಿ ರೂ. ಗಳ ವಿವಿಧ ಅಭಿವೃದ್ಧಿ ಯೋಜನೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ಕಾರಣ ಕೃಷ್ಣಾ ಮೇಲ್ದಂಡೆ ಯೋಜನೆ 1ನೇ ಹಂತ ಮುಗಿಯಲು 50ವರ್ಷ ಬೇಕಾಯಿತು. ರೈತರಿಂದ ವಶ ಪಡಿಸಿಕೊಂಡಿದ್ದ ಭೂಮಿಗೆ ದರ ನಿಗದಿ ಮಾಡಲು ಕಾಂಗ್ರೆಸ್ಗೆ ಆಗಲಿಲ್ಲ. ಅವರಿಗೆ ನಾಚಿಕೆ ಬರಬೇಕು. ನಮಗೆ ಪಾಠ ಹೇಳಲು ಬರುತ್ತಾರೆ. ಪ್ರತಿ ವರ್ಷ ಯೋಜನೆಗೆ 10ಸಾವಿರ ಕೋಟಿ ನೀಡುವುದಾಗಿ ಸಿದ್ದರಾಮಯ್ಯ ಮಾಡಿದ ಆಣೆ ಪ್ರಮಾಣ ಎಲ್ಲಿ ಹೋಯಿತು. ಐದು ವರ್ಷದಲ್ಲಿ ಅಬ್ಬಬ್ಬಾ ಅಂದರೆ 5-6ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿರಬೇಕು. ಅದನ್ನೇ ತಮ್ಮ ಸಾಧನೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿದ್ದೇನೆ- ಸಿಎಂ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕಳೆದ ಬಜೆಟ್ ನಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿದ್ದೇನೆ. ಈ ಮೂಲಕ ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಘೋಷಿಸಿದರು. ಒಟ್ಟು ಮೂರು ಬಜೆಟ್ ನಲ್ಲಿ ಸಮಗ್ರ ಕರ್ನಾಟಕ ಅಭಿವೃದ್ಧಿಗೆ 2ಲಕ್ಷ ಕೋಟಿ ರೂ. ಕಾಯ್ದಿರಿಸಲಾಗಿದೆ. ಹಂತ ಹಂತವಾಗಿ ಮೂಲಸೌಲಭ್ಯ ಒದಗಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಶಾಸಕ ನಡಹಳ್ಳಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ: ನಡಹಳ್ಳಿ ನನ್ನ ಸಣ್ಣ ತಮ್ಮನಿದ್ದ ಹಾಗೇ ಆತ ತನ್ನ ಕ್ಷೇತ್ರಕ್ಕೆ ಅನುದಾನ ಪಡೆಯಲು ಭಾರಿ ಕಥೆ ಕಟ್ಟುತ್ತಾನೆ. ಆತ ಹೇಳುವ ಮಾತಿನಿಂದ ಅನಿವಾರ್ಯವಾಗಿ ಅನುದಾನ ಬಿಡುಗಡೆ ಮಾಡಲೇ ಬೇಕಾಗುತ್ತದೆ. ಕ್ಷೇತ್ರದ ಅಭಿವೃದ್ಧಿ ಬಿಟ್ಟು ಬೇರೆ ವಿಷಯ ಆತ ಮಾತನಾಡಿದ್ದು ನೋಡಿಲ್ಲ, ಈಗ ಆತನಿಗೆ ನಾನೇ ಸಿಕ್ಕಿದ್ದೇನೆ, ಅನುದಾನದ ಹೊಳೆಯನ್ನು ಹರಿಸುತ್ತಿದ್ದೇನೆ ಎಂದರು.
ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಕಳೆದ ಐದು ವರ್ಷದಲ್ಲಿ ಮುದ್ದೇಬಿಹಾಳ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇನೆ. 65ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ನಿಂದ ಆಗದ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಅವಧಿಯಲ್ಲಿ ಕೇಳಿದಷ್ಟು ಅನುದಾನ ನೀಡಿದ ಕಾರಣ ಈ ಎಲ್ಲ ಕೆಲಸ ಮಾಡಲು ಸಾಧ್ಯವಾಗಿದೆ. ಕ್ಷೇತ್ರದ 126ಹಳ್ಳಿಗಳ ಪೈಕಿ 118ಹಳ್ಳಿಗಳಿಗೆ 360ಕೋಟಿ ವೆಚ್ಚದಲ್ಲಿ ಮೂಲಸೌಲಭ್ಯ ಒದಗಿಸಿದ್ದೇನೆ ಎಂದರು.
ಇದನ್ನೂ ಓದಿ:ಎಪಿಎಲ್ ಕಾರ್ಡ್ದಾರರಿಗೂ ಉಚಿತ ಡಯಾಲಿಸಿಸ್ ಚಿಕಿತ್ಸೆ ಚಿಂತನೆ: ಸಚಿವ ಸೋಮಣ್ಣ