ವಿಜಯಪುರ: ನೀರು ಬಿಡುವ ವಿಚಾರದಲ್ಲಿ ಶಾಸಕ ಶಿವನಗೌಡ ನಾಯಕ್ ಹಾಗೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಧ್ಯೆ ವಾಗ್ವಾದ ನಡೆದಿದೆ.
ಆಲಮಟ್ಟಿಯಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಆಲಮಟ್ಟಿಯಿಂದ ರೈತರ ಹೊಲಗಳಿಗೆ ನೀರು ಹರಿಸಲು ಕೆಲ ನಿರ್ಬಂಧನೆ ಹಾಕಿದ ಡಿಸಿಎಂ ವಿರುದ್ಧ ಶಾಸಕ ಶಿವನಗೌಡ ನಾಯಕ ಗರಂ ಆಗಿದ್ದಲ್ಲದೆ ಆವಾಜ್ ಹಾಕಿದ್ದಾರೆ.
ಬಸವಸಾಗರದಿಂದ ನಾರಾಯಣಪುರ ಬಲದಂಡೆಗೆ ನೀರು ಹರಿಸಿ, ನಿಮ್ಮ ಕಥೆ ಕೇಳೋಕೆ ನಾವಿಲ್ಲಿ ಬಂದು ಕೂತಿಲ್ಲ. ಜಲಾಯಶದಿಂದ ಮಾರ್ಚ್ 20ರಿಂದ 30ರವರೆಗೂ ನೀರು ಬಿಡಬೇಕು. ನೀರಿದ್ದೂ ಬಿಡಲಿಲ್ಲ ಅಂದ್ರೆ ರೈತರು ನಮ್ಮ ಮುಖದ ಮೇಲೆ ಹೊಡಿತಾರೆ. ಚೇರ್ಮನ್ ಆಗಿ ನೀವು ಅಧಿಕಾರಿಗಳಿಗೆ ಹೇಳಿ ನೀರು ಬಿಡಿಸಬೇಕು ಎಂದು ಏರುಧ್ವನಿಯಲ್ಲಿ ಶಾಸಕ ಶಿವನಗೌಡ ನಾಯಕ, ಗೋವಿಂದ ಕಾರಜೋಳ ಅವರನ್ನು ತರಾಟೆಗೆ ತೆಗೆದುಕೊಂಡರು. ಇಬ್ಬರ ನಡುವಿನ ವಾಗ್ವಾದ ನೋಡುತ್ತಾ ಸಭೆಯಲ್ಲಿದ್ದ ಕೆಬಿಜೆಎನ್ಎಲ್ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಮೂಕ ಪ್ರೇಕ್ಷಕರಾಗಿದ್ದರು.