ವಿಜಯಪುರ : ವಿದೇಶಿ ಪ್ರವಾಸದಿಂದ ಬಂದ ಬಳಿಕ ಯಡಿಯೂರಪ್ಪರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆಯೇ ಹೊರತು ಯಾವುದೇ ಮಂತ್ರಿ ಸ್ಥಾನ ನೀಡಿ ಎಂದು ಕೇಳಲು ಹೋಗಿಲ್ಲ. ನನಗೆ ಕೊಡುವುದಾದರೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಹಿತ ಕ್ಯಾಬಿನೆಟ್ ಮಂತ್ರಿ ಸ್ಥಾನವನ್ನೇ ಕೊಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ಆದಷ್ಟು ಬೇಗ ಸಂಪುಟ ವಿಸ್ತರಣೆ ನಡೆಯಲಿದೆ. ನಾನು ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡಬೇಕು ಎಂದು ಯಾರ ಮೇಲೂ ಒತ್ತಡ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾರಿಗೆ ಸಚಿವ ನೀಡಬೇಕು ಅನ್ನೋದು ಸಿಎಂ ಯಡಿಯೂರಪ್ಪನವರಿಗೆ ಬಿಟ್ಟ ವಿಚಾರ. ಮೂಲ ಬಿಜೆಪಿಯವರಿಗೂ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಹಲವು ಶಾಸಕರು ರಾಜೀನಾಮೆ ನೀಡಿದ್ದಕ್ಕಾಗಿ ಸರ್ಕಾರ ರಚನೆಯಾಗಿದೆ. ರಾಜೀನಾಮೆ ವೇಳೆ ಅವರೊಂದಿಗೂ ಸಿಎಂ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಸಂಪುಟ ರಚನೆ ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.
ವಾಜಪೇಯಿ ಅಧಿಕಾರಾವಧಿಯಲ್ಲಿ ಕೇಂದ್ರದಲ್ಲಿ ಮಂತ್ರಿಯಾದವನು ನಾನು. ಆದ್ರೂ ಮಂತ್ರಿಸ್ಥಾನವನ್ನು ತ್ಯಾಗ ಮಾಡಿದ್ದೇನೆ. ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಬಿಜೆಪಿಯಲ್ಲಿ ಎಲ್ಲ ಸ್ಥಾನಗಳನ್ನು ಅನುಭವಿಸಿದವರು ಸಚಿವ ಸ್ಥಾನ ತ್ಯಾಗ ಮಾಡಲಿ ಎಂದು ಪರೋಕ್ಷವಾಗಿ ಸಚಿವ ಜಗದೀಶ್ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು.
ನನಗೆ ಸಚಿವ ನೀಡುವ ವಿಚಾರ ಮುನ್ನೆಲೆಗೆ ಬಂದ್ರೆ, ಸಚಿವ ಸ್ಥಾನ ನೀಡಬೇಡಿ ಎಂದು ದೆಹಲಿ ಹಾಗೂ ಬೆಂಗಳೂರಿಗೆ ಎರಡು ನಿಯೋಗ ಹೋಗುತ್ತೆ ಎಂದು ವ್ಯಂಗವಾಡುತ್ತಾ ಪರೋಕ್ಷವಾಗಿ ಸಂಸದ ರಮೇಶ್ ಜಿಗಜಿಣಗಿ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ವಿರುದ್ಧ ವಾಗ್ದಾಳಿ ಮಾಡಿದ್ರು.