ವಿಜಯಪುರ: ಹಿಂದೂ ಪದ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್ ಪ್ರತಿಕ್ರಿಯಿಸಿ ಕಾಂಗ್ರೆಸ್ನವರು ಮುಸ್ಲಿಂ ತುಷ್ಟೀಕರಣಕ್ಕಾಗಿ ಯಾವ ಮಟ್ಟಕ್ಕಾದರು ಹೋಗುತ್ತಾರೆ. ಅವರ ತುಷ್ಟೀಕರಣದಿಂದ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿ ಕಾಂಗ್ರೆಸ್ ಇದೆ ಎಂದು ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದುತ್ವ ಕುರಿತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ದಿಗ್ವಿಜಯ ಸಿಂಗ್, ಸಿದ್ದರಾಮಯ್ಯ ಮಾತನಾಡಿದ್ದಾರೆ. ಕಾಂಗ್ರೆಸ್ನಲ್ಲಿ ಹಿಂದೂಗಳ ಮತ ಹಾಗೂ ಭಾವನೆಗೆ ಬೆಲೆ ಇಲ್ಲವಾಗಿದೆ. ಈಗಾಗಲೇ ಜನ ಅವರಿಗೆ ಬುದ್ಧಿ ಕಲಿಸಿದ್ದು, ಕೇಂದ್ರದಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನ ಸಹ ಕಾಂಗ್ರೆಸ್ಗೆ ಇಲ್ಲದಾಗಿದೆ ಎಂದರು. ಸತೀಶ್ ಜಾರಕಿಹೊಳಿ ಯಾರೋ ಬರೆದಿದ್ದನ್ನು ತೋರಿಸಿದ್ದಾರೆ. ಅವರು ಯೋಚಿಸಬೇಕು, ಉದ್ದೇಶ ಪೂರ್ವಕವಾಗಿ ಹಿಂದೂ ಧರ್ಮಕ್ಕೆ ಅವಮಾನ ಮಾಡುವುದರಿಂದ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ನಿಜವಾಗಿ ಸತೀಶ್ ಜಾರಕಿಹೊಳಿಯವರ ಹೇಳಿಕೆ ಖಂಡಿಸುವುದಾದರೆ ಅವರನ್ನು ತಕ್ಷಣ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು.
ವಿದೇಶಿ ತಳಿ: ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ರಾಹುಲ್ ಗಾಂಧಿ ವಿದೇಶಿ ತಳಿ, ಅವರು ನಿಜವಾದ ತಳಿಯಲ್ಲ ಎಂದು ಕಿಡಿಕಾರಿದರು. ಅವರು ಹಿಂದು ಧರ್ಮಕ್ಕೂ ಸೇರಿದವರಲ್ಲ, ಅವರೊಂದು ಸಂಪೂರ್ಣ ತಳಿ ಬೇರೆಯಾಗಿದೆ ಎಂದು ಯತ್ನಾಳ್ ಟೀಕಿಸಿದರು.
ನಾನೇ ಸ್ಟಾರ್ ಕ್ಯಾಂಪೇನರ್: ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಅವರು ನಿನ್ನೆ ಕಾರ್ಯಕ್ರಮ ಮುಗಿಸಿಕೊಂಡು ಹೋಗುವಾಗ ನಮ್ಮ ಹೈಪರ್ ಮಾರ್ಟ್ಗೆ ಭೇಟಿ ನೀಡಿದ್ದರು, ಈ ವೇಳೆ ಅವರ ಜತೆ ಸೌಜನ್ಯದಿಂದ ಮಾತನಾಡಿದ್ದೇನೆ ಎಂದು ಅವರೊಂದಿಗಿನ ಭೇಟಿಯ ಬಗ್ಗೆ ಯತ್ನಾಳ್ ಸಮಜಾಯಿಸಿ ನೀಡಿದರು. ನಂತರ ಮಾತನಾಡಿ, ಬರುವ ಚುನಾವಣೆಯಲ್ಲಿ ತಮ್ಮ ಶಕ್ತಿ, ಜನಪ್ರಿಯತೆ, ಪ್ರಾಮಾಣಿಕತೆಯನ್ನು ಪಕ್ಷ ಸಮರ್ಥವಾಗಿ ಬಳಸಿಕೊಳ್ಳುತ್ತದೆ ಎಂದು ಹೇಳುವ ಮೂಲಕ ಅವರು ಚುನಾವಣೆ ಪ್ರಚಾರದಲ್ಲಿ ತಮ್ಮದು ಪ್ರಮುಖ ಪಾತ್ರ ಇದ್ದು, ನನ್ನನ್ನು ಸ್ಟಾರ್ ಕ್ಯಾಂಪೇನರ್ ಎಂದು ಸಂಕೇತ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿ ಎಲ್ಲ ನಾಯಕರ ಜೊತೆ ಪ್ರಚಾರ ಮಾಡು ಎಂದರೆ ಮಾಡುವೆ. ಪ್ರತ್ಯೇಕವಾಗಿ ಪ್ರಚಾರ ಎಂದರೆ ಪಕ್ಷದ ತೀರ್ಮಾನಕ್ಕೆ ತಾವು ಬದ್ಧ ಎಂದು ಹೇಳಿದರು.
ಇನ್ನು, ವಿಜಯಪುರ ಜಿಲ್ಲೆಯ ವಿರೋಧ ಪಕ್ಷದ ಶಾಸಕರೊಬ್ಬರ ವಿರುದ್ಧ ಯತ್ನಾಳ್ ಮಾತನಾಡಿ, ಅವರು ಪಾಲಿಕೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಲಿಲ್ಲ, ಅದಕ್ಕೆ ವಿಜಯಪುರ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಗರ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಾರೆ ಎನ್ನುವ ಮಾತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿ, ಸುಡಗಾಡಕ್ಕೆ ಬರಲಿ, ಹೆದರಿಕೆ ಯಾಕೆ? ಈ ರೀತಿ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮಣಿಯುವುದಿಲ್ಲ. ಒಮ್ಮೆ ಮುದ್ದೇಬಿಹಾಳ, ಇನ್ನೊಮ್ಮೆ ಬಾಗೇವಾಡಿ, ಸಿಂದಗಿ, ಇಂಡಿ, ವಿಜಯಪುರ ಕ್ಷೇತ್ರಕ್ಕೆ ನಿಲ್ಲುತ್ತೇನೆ ಎನ್ನುತ್ತಾರೆ. ನಾನೇನು ರೊಕ್ಕ ಕೊಡವವನು ಅಲ್ಲ ಎಂದು ಯತ್ನಾಳ್ ಗರಂ ಆದರು.
ಇನ್ನು, ವಿವಾದಾತ್ಮಕ ಹೇಳಿಕೆ ನೀಡಿರುವ ಸತೀಶ್ ಜಾರಕಿಹೊಳಿ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಗಾಂಧಿವೃತ್ತದವರೆಗೂ ತಲುಪಿತು. ದಾರಿಯುದ್ದಕ್ಕೂ ಸತೀಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.
ಇದನ್ನೂ ಓದಿ: ಶಾಸಕ ಯತ್ನಾಳ್ ಅರುಣ್ ಸಿಂಗ್ ಭೇಟಿ ಬಿಜೆಪಿ ವಲಯದಲ್ಲಿ ಸಂಚಲನ