ವಿಜಯಪುರ : ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ವಿಚಾರದಲ್ಲಿ ಹೈಕಮಾಂಡ್ ನಿರ್ಣಯವೇ ಅಂತಿಮ. ಅವರು ಏನು ನಿರ್ಧಾರ ಮಾಡುತ್ತಾರೋ ಗೊತ್ತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು. ಜಿಲ್ಲೆಯ ಇಂಚಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸ್ಪಷ್ಟ ಸಂದೇಶ ಕೇಂದ್ರದಿಂದ ಬಂದಿಲ್ಲ. ಈಗ ನಾವು ಏನೇ ಮಾತನಾಡಿದ್ರೂ ಅದು ಊಹಾಪೋಹಗಳಾಗುತ್ತವೆ. ಪಕ್ಷದ ಕಾರ್ಯಕಾರಿಣಿ ಬಳಿಕ ಒಟ್ಟಾರೆ ಉತ್ತಮ ಬೆಳವಣಿಗೆ ಆಗುತ್ತದೆ ಎಂದು ಭವಿಷ್ಯ ನುಡಿದರು.
ವೈಯಕ್ತಿಕ ಹಾಗೂ ಕಾರ್ಯಕಾರಿಣಿ ಕೆಲಸದ ನಿಮಿತ್ತ ನಾನು ದೆಹಲಿಗೆ ಹೋಗಿದ್ದೆ ಹೊರತು ರಾಜಕೀಯ ಲಾಬಿ ಮಾಡೋದಕ್ಕೆ ನಾನು ದೆಹಲಿಗೆ ಹೋಗಿಲ್ಲ ಎಂದು ಸ್ಪಷ್ಟ ಪಡಿಸಿದರು. ಇನ್ನೂ ಯತ್ನಾಳ್ ಸಚಿವರಾಗಲು ಬಿ ವೈ ವಿಜಯೇಂದ್ರ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಹೈಕಮಾಂಡ್ ಎಂಥಿಂತವರನ್ನೇ ಮನೆಯಲ್ಲಿ ಕೂರಿಸಿದೆ. ಇನ್ನೂ ವಿಜಯೇಂದ್ರ ಮೊನ್ನೆ ಮೊನ್ನೆ ಹುಟ್ಟಿದ ಹುಡುಗ. ಬಿಜೆಪಿಯಲ್ಲಿ ಇನ್ಮುಂದೆ ವಂಶಪಾರಂಪರ್ಯಕ್ಕೆ ಅವಕಾಶವಿಲ್ಲ ಎಂದರು.
ಇದನ್ನೂ ಓದಿ: ಚಂದ್ರು ಹತ್ಯೆ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ : ಸಿಎಂ ಬೊಮ್ಮಾಯಿ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ನಾವು ಸರ್ಕಾರಕ್ಕೆ ಗಡುವು ನೀಡಿದ್ದೆವು. ಸಿಎಂ ಅವರು ಸದನದಲ್ಲಿ ಸ್ಪಷ್ಟ ಭರವಸೆ ನೀಡಿದ ಕಾರಣ ನಾವು ಕಾಯುತ್ತಿದ್ದೇವೆ. ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ಸಮಾಜಗಳ ಸಮಗ್ರ ಪುನಾರಚನೆ ಆಗಬೇಕು ಎಂದು ಸಿಎಂ ಹೇಳಿದ್ದಾರೆ. ಆದಷ್ಟು ಬೇಗ ನಮ್ಮ ಬೇಡಿಕೆ ಈಡೇರಲಿದೆ ಎಂದು ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.
ಹಿಜಾಬ್ ವಿಚಾರದಲ್ಲಿ ಸಂವಿಧಾನವನ್ನೂ ಒಪ್ಪೋದಿಲ್ಲ, ಕೋರ್ಟ್ ಆದೇಶವನ್ನೂ ಒಪ್ಪಲ್ಲ ಅಂದ್ರೆ ಅವರಿಗೆ ನಮ್ಮ ದೇಶದ ಮೇಲೆ ಗೌರವ ಇಲ್ಲ ಎಂದು ಸಹಜವಾಗಿ ಎನಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಚಂದ್ರು ಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಏನಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಂಪೂರ್ಣ ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರು.