ವಿಜಯಪುರ: ನಾನು ಮತ್ತು ಸಚಿವ ಸೋಮಣ್ಣ ಬಹಳ ಆತ್ಮೀಯರು. ಹಿಂದೆ ಜಗಳ ಆಡಿದ್ವಿ, ಈಗ ಒಂದಾಗಿದ್ದೇವೆ. ನಾವೆಲ್ಲ ಒಂದೇ ಕುಟುಂಬದವರು. ಒಂದಾಗಲೇಬಾರದಾ? ಎಂದು ಶಾಸಕ ಯತ್ನಾಳ ಪ್ರಶ್ನಿಸಿದರು.
ನಗರದ ಹೊರವಲಯದಲ್ಲಿ ನಡೆದ ಆಶ್ರಯ ಮನೆ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಜಗಳ ಆಗಿತ್ತು. ಈಗ ಎಲ್ಲವೂ ಒಳ್ಳೆಯದಾಗಿದೆ. ಕೆಲವರು ನನ್ನನ್ನು ಮುಗಿಸಬೇಕೆಂದು ಕುಂತಿದ್ದಾರೆ ಎಂದು ತಮ್ಮ ಟೀಕಾಕಾರರ ವಿರುದ್ಧ ಕಿಡಿಕಾರಿದರು.
ವಿಜಯಪುರದಿಂದ ಬೆಂಗಳೂರಿನವರೆಗೆ ನನ್ನ ಮುಗಿಸಿ ಬಿಡಬೇಕು ಅಂತಾ ಬಹಳ ಜನ ಇದ್ದಾರೆ. ಯತ್ನಾಳರನ್ನು ಮುಗಿಸೋಕೆ ಆಗೊಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಹೊಡೆತಕ್ಕೆ 10 ಕಾರ್ಪೋರೇಷನ್ಗಳಿಗೆ ಹಣ ಬಂದಿದೆ. ನಾನು ಮಾತನಾಡಿದ್ದರಿಂದಲೇ ಒಂದಲ್ಲ 10 ಕಾರ್ಪೊರೇಷನ್ಗಳಿಗೆ ಹಣ ಸಿಕ್ಕಿದೆ ಎಂದು ಯತ್ನಾಳ ತಮ್ಮ ಮುಂಚಿನ ಹೇಳಿಕೆಯಿಂದ ಆದ ಬದಲಾವಣೆ ಬಗ್ಗೆ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದರು.